ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಡಕ್ ನದಿಯ ನೀರಿನ ಮಟ್ಟ ಏರಿಕೆ ಮತ್ತು ಪ್ರವಾಹದ ಭೀತಿಯಿಂದ ತತ್ತರಿಸಿರುವ ಬಿಹಾರದ ಜನರ ರಕ್ಷಣೆಗೆ ಭಾರತೀಯ ವಾಯುಪಡೆ (IAF) ಧಾವಿಸಿದೆ. ವಾಯುಪಡೆಯ ಅತ್ಯಾಧುನಿಕ ಎಂಐ-17 ವಿ5 ಹೆಲಿಕಾಪ್ಟರ್‌ಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ತುರ್ತು ಪರಿಹಾರ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ವಾಯುಪಡೆ ತಿಳಿಸಿದೆ.
10 ಟನ್ ಪರಿಹಾರ ಸಾಮಗ್ರಿ ವಿತರಣೆ
ಪಾಟ್ನಾದಿಂದ ಕಾರ್ಯಾಚರಣೆ ನಡೆಸುತ್ತಿರುವ ವಾಯುಪಡೆಯ ‘ಟೀಮ್ ಸಿಲ್ವರ್ ಫಾಲ್ಕನ್ಸ್’ ಪಡೆಯು, ಅ. 2 ರಂದು ಇಡೀ ದಿನ ನಿರಂತರವಾಗಿ ಹಾರಾಟ ನಡೆಸಿ ಭೀಕರ ಪ್ರವಾಹಕ್ಕೆ ಸಿಲುಕಿರುವ ಸರಣ್ ಜಿಲ್ಲೆಯ ಚಾಕಿಯಾ, ಪೃಥ್ವಿಪುರ್, ಸತ್ಜೋಡಾ, ಕರ್ಚೋಲಿಯಾ ಮತ್ತು ಮೇಕರ್ ಪ್ರದೇಶಗಳಲ್ಲಿ 10 ಟನ್‌ಗಳಿಗೂ ಹೆಚ್ಚು ತೂಕದ ಅಗತ್ಯ ದಿನಸಿ ಮತ್ತು ತುರ್ತು ಪರಿಹಾರ ಸಾಮಗ್ರಿಗಳನ್ನು ತಲುಪಿಸಿದೆ. ಹವಾಮಾನ ವೈಪರೀತ್ಯ ನಡುವೆಯೂ ವಾಯುಪಡೆಯು ಸಂಕಷ್ಟದಲ್ಲಿರುವ ಬಿಹಾರದ ಜನರೊಂದಿಗೆ ನಿಂತಿದೆ.
ಗಂಡಕ್ ಬ್ಯಾರೇಜ್‌ನಿಂದ ಭಾರೀ ನೀರು ಬಿಡುಗಡೆ
ವಾಲ್ಮೀಕಿನಗರದ ಗಂಡಕ್ ಬ್ಯಾರೇಜ್‌ನಿಂದ 5,43,500 ಕ್ಯೂಸೆಕ್ ಭಾರಿ ಪ್ರಮಾಣದ ನೀರನ್ನು ಹೊರಬಿಟ್ಟಿರುವುದರಿಂದ ಬಿಹಾರದ ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಗೋಪಾಲಗಂಜ್, ಸರಣ್, ಮುಜಾಫರ್‌ಪುರ್ ಮತ್ತು ವೈಶಾಲಿ ಜಿಲ್ಲೆಗಳು ಪ್ರವಾಹದ ಬಿಕ್ಕಟ್ಟನ್ನು ಎದುರಿಸುತ್ತಿವೆ. ಗಂಡಕ್ ಬ್ಯಾರೇಜ್‌ನಲ್ಲಿ ನೀರಿನ ಹರಿವು ಸತತ 13 ಗಂಟೆಗಳ ಕಾಲ 5 ಲಕ್ಷ ಕ್ಯೂಸೆಕ್‌ಗಿಂತಲೂ ಅಧಿಕವಾಗಿತ್ತು ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ.
ಇದನ್ನೂ ಓದಿ:
ಸಾರ್ವಕಾಲಿಕ ದಾಖಲೆ ಬರೆದ ನದಿಯ ನೀರಿನ ಮಟ್ಟ
ಕಳೆದ ಕೆಲವು ದಿನಗಳಿಂದ ಬಿಹಾರದ ಗಡಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಬ್ಯಾರೇಜ್‌ನಿಂದ ಬಿಡುಗಡೆಯಾದ ನೀರಿನ ಪ್ರಮಾಣವು 2024 ರ ಗರಿಷ್ಠ ಮಟ್ಟಕ್ಕಿಂತ ಕೊಂಚ ಕಡಿಮೆಯಿದ್ದರೂ, ಬಗಹಾ ಗೇಜ್ ವಲಯದಲ್ಲಿ ಗಂಡಕ್ ನದಿಯ ನೀರಿನ ಮಟ್ಟ 91.25 ಮೀಟರ್‌ಗೆ ತಲುಪುವ ಮೂಲಕ ಸಾರ್ವಕಾಲಿಕ ಹೊಸ ದಾಖಲೆ ಬರೆದಿದೆ. ಇದು 2024 ರಲ್ಲಿ ದಾಖಲಾಗಿದ್ದ ಹಿಂದಿನ ಗರಿಷ್ಠ ಮಟ್ಟಕ್ಕಿಂತ 0.35 ಮೀಟರ್‌ನಷ್ಟು ಹೆಚ್ಚಾಗಿದೆ.



