ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಗೇಮ್ಸ್ 2026ರ ಪುರುಷರ ಹಾಕಿ ಫೈನಲ್ನಲ್ಲಿ ಮಲೇಷ್ಯಾವನ್ನು 5-1 ಅಂತರದಲ್ಲಿ ಮಣಿಸಿದ ಭಾರತ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದು ಸಂಭ್ರಮಿಸಿದೆ.
ಈ ಗೆಲುವಿನೊಂದಿಗೆ ಭಾರತ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ನೇರ ಅರ್ಹತೆಯನ್ನೂ ಪಡೆದುಕೊಂಡಿದೆ. ಈ ಗೆಲುವಿನಿಂದ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 85ಕ್ಕೆ ಏರಿದ್ದು, ಇದರಲ್ಲಿ 21 ಚಿನ್ನ, 27 ಬೆಳ್ಳಿ ಮತ್ತು 37 ಕಂಚಿನ ಪದಕಗಳಿವೆ.
ಆಕ್ರಮಣಕಾರಿ ಆಟ ಆರಂಭಿಸಿದ ಭಾರತ
ಫೈನಲ್ನಲ್ಲಿ ಆರಂಭದಿಂದಲೇ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. 12ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶವನ್ನು ನಾಯಕ ಹರ್ಮನ್ಪ್ರೀತ್ ಸಿಂಗ್ ನಿಖರ ಡ್ರ್ಯಾಗ್-ಫ್ಲಿಕ್ ಮೂಲಕ ಗೋಲಾಗಿ ಪರಿವರ್ತಿಸಿ ಭಾರತಕ್ಕೆ ಮುನ್ನಡೆ ತಂದರು. ಆದರೆ ಕೆಲವೇ ನಿಮಿಷಗಳಲ್ಲಿ ಮಲೇಷ್ಯಾದ ಶೆಲ್ಲೊ ಸಿಲ್ವೇರಿಯಸ್ ಕಠಿಣ ಕೋನದಿಂದ ಗೋಲು ಬಾರಿಸಿ ಪಂದ್ಯವನ್ನು 1-1ರಿಂದ ಸಮಬಲಗೊಳಿಸಿದರು.
ಎರಡನೇ ಕ್ವಾರ್ಟರ್ನಲ್ಲಿ ಭಾರತ ಮತ್ತೆ ಮುನ್ನಡೆ ಸಾಧಿಸಿತು. 23ನೇ ನಿಮಿಷದಲ್ಲಿ ಜುಗ್ರಾಜ್ ಸಿಂಗ್ ಪೆನಾಲ್ಟಿ ಕಾರ್ನರ್ನಿಂದ ಗೋಲು ದಾಖಲಿಸಿದರು. ಹೀಗಾಗಿ ಮೊದಲಾರ್ಧ ಮುಕ್ತಾಯಕ್ಕೆ ಭಾರತ 2-1 ಮುನ್ನಡೆ ಕಾಯ್ದುಕೊಂಡಿತು.
ಮೂರನೇ ಕ್ವಾರ್ಟರ್ನಲ್ಲಿ ಭಾರತ ಚೆಂಡಿನ ಮೇಲಿನ ನಿಯಂತ್ರಣವನ್ನು ಮುಂದುವರಿಸಿತು. 43ನೇ ನಿಮಿಷದಲ್ಲಿ ಮಲೇಷ್ಯಾದ ಆಟಗಾರನ ದೇಹಕ್ಕೆ ಚೆಂಡು ತಾಗಿದ ಹಿನ್ನೆಲೆಯಲ್ಲಿ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ದೊರೆಯಿತು. ಹಾರ್ದಿಕ್ ಸಿಂಗ್ ಯಾವುದೇ ತಪ್ಪಿಗೆ ಅವಕಾಶ ನೀಡದೆ ಅದನ್ನು ಗೋಲಾಗಿ ಪರಿವರ್ತಿಸಿ ಭಾರತದ ಮುನ್ನಡೆಯನ್ನು 3-1ಕ್ಕೆ ವಿಸ್ತರಿಸಿದರು.
ಕೊನೆಯಲ್ಲೂ ಅದ್ಭುತ ಆಟ
ಕೊನೆಯ ಕ್ವಾರ್ಟರ್ನಲ್ಲಿ ಭಾರತದ ಆಕ್ರಮಣ ಮತ್ತಷ್ಟು ತೀವ್ರಗೊಂಡಿತು. 55ನೇ ನಿಮಿಷದಲ್ಲಿ ಶಿಲಾನಂದ್ ಲಕ್ರಾ ಸಮೀಪದಿಂದ ಗೋಲು ಗಳಿಸಿದರೆ, ಎರಡು ನಿಮಿಷಗಳ ಬಳಿಕ ಹರ್ಮನ್ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು. ಇದರೊಂದಿಗೆ ಭಾರತ 5-1 ಮುನ್ನಡೆ ಸಾಧಿಸಿತು.
ಇದು ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಭಾರತದ ಪುರುಷರ ಹಾಕಿ ತಂಡದ ಐದನೇ ಚಿನ್ನವಾಗಿದೆ. 1966, 1998, 2014 ಮತ್ತು 2022ರ ಬಳಿಕ ಇದೀಗ 2026ರಲ್ಲೂ ಭಾರತ ಸುವರ್ಣ ಸಾಧನೆ ಮಾಡಿದೆ. ಇದೇ ಕೂಟದಲ್ಲಿ ಮಹಿಳಾ ತಂಡವೂ ಚಿನ್ನ ಗೆದ್ದಿರುವುದರಿಂದ, ಏಷ್ಯನ್ ಗೇಮ್ಸ್ನಲ್ಲಿ ಪುರುಷ ಮತ್ತು ಮಹಿಳಾ ಎರಡೂ ತಂಡಗಳು ಚಿನ್ನ ಗೆದ್ದ ಅಪರೂಪದ ಸಾಧನೆಯನ್ನು ಭಾರತೀಯ ಹಾಕಿ ದಾಖಲಿಸಿದೆ.



