ಹೊಸದಿಗಂತ ವರದಿ ಬೆಳಗಾವಿ:
ದಸರಾ ಹಬ್ಬದ ಹಿನ್ನೆಲೆಯಲ್ಲಿ ಗಾಳಿಪಟ ಹಾರಾಟದ ಸಂಭ್ರಮ ಹೆಚ್ಚುತ್ತಿರುವ ಬೆನ್ನಲ್ಲೇ, ಪ್ರಾಣಾಪಾಯ ಉಂಟುಮಾಡುವ ನಿಷೇಧಿತ ‘ಮಾಂಜಾ’ ದಾರದ ವಿರುದ್ಧ ಜಿಲ್ಲಾ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇತ್ತೀಚೆಗೆ ಬೆಳಗಾವಿಯಲ್ಲಿ ಬೈಕ್ ಸವಾರನೊಬ್ಬ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಮೃತಪಟ್ಟ ದುರಂತದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ಮೇಲೆ ನಿಗಾ ವಹಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್ಪಿ ಕೆ. ರಾಮರಾಜನ್ ಅವರು ಮಾಂಜಾ ದಾರ ಮಾರಾಟಗಾರರು ಹಾಗೂ ಬಳಕೆದಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:
ನಿಷೇಧಿತ ಮಾಂಜಾ ದಾರವನ್ನು ಮಾರಾಟ ಮಾಡುವುದು ಕಂಡುಬಂದರೆ ಯಾವುದೇ ದಾಕ್ಷಿಣ್ಯವಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಹಬ್ಬದ ಸಂಭ್ರಮದ ವೇಳೆ ಸಾರ್ವಜನಿಕರ ಸುರಕ್ಷತೆಗೆ ಧಕ್ಕೆ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
“ನಮ್ಮ ಹಬ್ಬದ ಸಂಭ್ರಮ ಮತ್ತೊಬ್ಬರ ಜೀವನಕ್ಕೆ ಕಂಟಕವಾಗಬಾರದು. ಮಾಂಜಾ ದಾರವನ್ನು ಯಾರೂ ಮಾರಾಟ ಮಾಡಬಾರದು ಹಾಗೂ ಖರೀದಿಸಬಾರದು” ಎಂದು ಎಸ್ಪಿ ಕೆ. ರಾಮರಾಜನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಸಾರ್ವಜನಿಕರು ಸಹಕಾರ ನೀಡುವಂತೆ ಪೊಲೀಸ್ ಇಲಾಖೆಯು ಮನವಿ ಮಾಡಿಕೊಂಡಿದೆ.



