October 3, 2026
Saturday, October 3, 2026
spot_img

ಬೆಳಗಾವಿಯಲ್ಲಿ ಅಮಾನವೀಯ ಕೃತ್ಯ: ದಾರಿ ಬಿಡಲಿಲ್ಲವೆಂದು ನಡುರಸ್ತೆಯಲ್ಲೇ ಮಹಿಳೆ ಮೇಲೆ ಚಪ್ಪಲಿಯಿಂದ ಹಲ್ಲೆ

ಹೊಸದಿಗಂತ ವರದಿ ಬೆಳಗಾವಿ:

ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಪರಿಣಾಮ ಸರ್ಕಾರಿ ಬಸ್‌ಗಳಲ್ಲಿ ಹೆಚ್ಚುತ್ತಿರುವ ಜನದಟ್ಟಣೆಯಿಂದ ಪ್ರಯಾಣಿಕರ ನಡುವೆ ಸಣ್ಣಪುಟ್ಟ ವಿಚಾರಗಳಿಗೂ ವಾಗ್ವಾದಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ನಿದರ್ಶನವೆಂಬಂತೆ, ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಬಸ್‌ನಿಂದ ಇಳಿಯಲು ದಾರಿ ಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿ, ಕಾಲಿನಿಂದ ಒದ್ದಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಹಳಿಯಾಳದಿಂದ ಬೆಳಗಾವಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಈ ಘಟನೆ ನಡೆದಿದೆ. ಕಕ್ಕೇರಿ ನಿಲ್ದಾಣದಿಂದ ಕುಟುಂಬಸ್ಥರೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ, ಬಸ್ ಚನ್ನಮ್ಮ ವೃತ್ತ ತಲುಪಿದಾಗ ಕೆಳಗಿಳಿಯುವ ಸಂದರ್ಭದಲ್ಲಿ ದಾರಿ ಬಿಡುವ ವಿಚಾರವಾಗಿ ಸಹಪ್ರಯಾಣಿಕನೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ ಎನ್ನಲಾಗಿದೆ.

ಬಸ್‌ನಿಂದ ಇಳಿದ ಬಳಿಕವೂ ಇಬ್ಬರ ನಡುವಿನ ವಾಗ್ವಾದ ಮುಂದುವರಿದಿದ್ದು, ಮಾತಿಗೆ ಮಾತು ಬೆಳೆದು ವ್ಯಕ್ತಿ ಮಹಿಳೆಯ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಕಾಲಿನಿಂದಲೂ ಒದ್ದಿದ್ದಾನೆ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ನಡೆದ ಈ ಘಟನೆ ಕಂಡ ಸ್ಥಳೀಯರು ಹಾಗೂ ಇತರ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ:

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರಯಾಣಿಕರು ಸಂಯಮ ಕಾಪಾಡಿಕೊಳ್ಳಬೇಕು ಹಾಗೂ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಕೇಳಿಬಂದಿದೆ.

Must Read