ಹೊಸದಿಗಂತ ವರದಿ ರಾಮನಗರ:
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿ ಸಿದ್ಧಪಡಿಸಲು ಸರ್ಕಾರ ರಚಿಸಿರುವ ನ್ಯಾಯಮೂರ್ತಿ ಗುಹಾನಾಥ್ ನರೇಂದರ್ ನೇತೃತ್ವದ ಸಮಿತಿ ಎರಡು ದಿನಗಳ ಕಾಲ ರೈತರಿಂದ ಸಾರ್ವಜನಿಕ ಅಹವಾಲುಗಳನ್ನು ಆಲಿಸಿದೆ.
ಭೂಸ್ವಾಧೀನಕ್ಕೆ ಒಳಪಡಲಿರುವ ಒಂಬತ್ತು ಕಂದಾಯ ಗ್ರಾಮಗಳ ವ್ಯಾಪ್ತಿಯ ಒಟ್ಟು 1,180 ಮಂದಿ ರೈತರು ಸಮಿತಿಯ ಮುಂದೆ ತಮ್ಮ ಅಭಿಪ್ರಾಯ ಹಾಗೂ ಬೇಡಿಕೆಗಳನ್ನು ಮಂಡಿಸಿದ್ದಾರೆ.
ಬುಧವಾರ 580 ಮಂದಿ ರೈತರು ಅಹವಾಲು ಸಲ್ಲಿಸಿದ್ದು, ಗುರುವಾರ 600 ಮಂದಿ ಸಮಿತಿ ಮುಂದೆ ಹಾಜರಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಗುರುವಾರ ರಾತ್ರಿ 8.30ರವರೆಗೂ ಅಹವಾಲು ಸ್ವೀಕರಿಸಿದ ಸಮಿತಿ, ಯೋಜನೆಯ ಪರ ಮತ್ತು ವಿರೋಧದಲ್ಲಿರುವ ಭೂಮಾಲೀಕರ ಅಭಿಪ್ರಾಯಗಳನ್ನು ದಾಖಲಿಸಿಕೊಂಡಿದೆ. ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲ ರೈತರು ಯಾವುದೇ ಕಾರಣಕ್ಕೂ ತಮ್ಮ ಜಮೀನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರೆ, ಯೋಜನೆಗೆ ಸಹಮತ ಹೊಂದಿರುವ ರೈತರು ಸೂಕ್ತ ಪರಿಹಾರ ಹಾಗೂ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಈಗಾಗಲೇ ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿ ಪರಿಹಾರ ಪಡೆದಿರುವ ಕೆಲವು ರೈತರೂ ಸಮಿತಿಯ ಮುಂದೆ ಹಾಜರಾಗಿ ಪರಿಹಾರ ಮೊತ್ತ ಪರಿಷ್ಕರಿಸುವಂತೆ ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿಗಳಿಂದ ಪರಿಹಾರ ಮೊತ್ತ ನಿಗದಿಪಡಿಸಿ ಸುಮಾರು ಒಂದೂವರೆ ವರ್ಷ ಕಳೆದಿದ್ದು, ಈ ಅವಧಿಯಲ್ಲಿ ಭೂಮಿಯ ಮೌಲ್ಯ ಹೆಚ್ಚಾಗಿದೆ. ಹೀಗಾಗಿ ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪರಿಹಾರ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಮಿತಿಯ ಸದಸ್ಯರಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಚ್.ವಿ. ರಂಗನಾಥ್, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಚ್.ಆರ್. ಉಮಾಶಂಕರ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಪ್ರಸನ್ನ ಕುಮಾರ್ ಅವರ ಸಮ್ಮುಖದಲ್ಲಿ ಅಹವಾಲು ಸಭೆ ನಡೆಯಿತು. ಹೊಸೂರು, ಕಂಚುಗಾರನಹಳ್ಳಿ, ಅರಳಾಳುಸಂದ್ರ, ವಡೇರಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಭೂಮಾಲೀಕರಿಗೂ ಅಭಿಪ್ರಾಯ ಮಂಡಿಸಲು ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ:
ಪರಿಹಾರ ಹೆಚ್ಚಳಕ್ಕೆ ಒತ್ತಾಯ
ಭೂಮಿಯ ಪ್ರಸ್ತುತ ಮೌಲ್ಯವನ್ನು ಪರಿಗಣಿಸಿ ಎಕರೆಗೆ ಹೆಚ್ಚಿನ ಪರಿಹಾರ ನೀಡಬೇಕು, ಜಂಟಿ ಮಾಪನ ಸಮೀಕ್ಷೆ (ಜೆಎಂಸಿ) ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಹಾಗೂ ಮರಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ವಸತಿ ಉದ್ದೇಶಕ್ಕೆ ಎಕರೆಗೆ 10,000 ಚದರ ಅಡಿ ಹಾಗೂ ವಾಣಿಜ್ಯ ಉದ್ದೇಶಕ್ಕೆ 9,000 ಚದರ ಅಡಿ ಅಭಿವೃದ್ಧಿಪಡಿಸಿದ ನಿವೇಶನ ನೀಡಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ.
ಇದಲ್ಲದೆ ಎ ಖರಾಬು ಜಮೀನಿಗೂ ಸಂಪೂರ್ಣ ಪರಿಹಾರ, ಫಾರಂ 53, 50 ಮತ್ತು 57ರಡಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಿ ಅರ್ಹರಿಗೆ ಪರಿಹಾರ ನೀಡುವುದು, ತಕರಾರು ಅರ್ಜಿಗಳ ವಿಲೇವಾರಿಯನ್ನು ತ್ವರಿತಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ರೈತರು ಸಮಿತಿ ಮುಂದಿಟ್ಟಿದ್ದಾರೆ. ಯೋಜನೆಯಡಿ ಹಂಚಿಕೆಯಾಗುವ ನಿವೇಶನಗಳನ್ನು ಕಾನೂನುಬದ್ಧ ವಾರಸುದಾರರು ತಮ್ಮೊಳಗೆ ವಿಭಾಗಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬ ಮನವಿಯೂ ಕೇಳಿಬಂದಿದೆ.
ಎರಡು ದಿನಗಳ ಅಹವಾಲು ಸ್ವೀಕಾರದ ಬಳಿಕ ಸಮಿತಿ ರೈತರಿಂದ ದಾಖಲಾದ ಅಭಿಪ್ರಾಯಗಳು, ಬೇಡಿಕೆಗಳು ಹಾಗೂ ಭೂಸ್ವಾಧೀನಕ್ಕೆ ಸಂಬಂಧಿಸಿದ ವಿಚಾರಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವಸ್ತುಸ್ಥಿತಿ ವರದಿ ಸಲ್ಲಿಸುವ ಪ್ರಕ್ರಿಯೆ ಮುಂದುವರಿಸಲಿದೆ.



