ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿ, ಚಿನ್ನದ ಪದಕ ಮುಡಿಗೇರಿಸಿಕೊಂಡ ಬಾಕ್ಸಿಂಗ್ ತಾರೆಯರಾದ ಲವ್ಲಿನಾ ಬೊರ್ಗೊಹೈನ್, ಪರ್ವೀನ್ ಹೂಡಾ ಮತ್ತು ಅಂಕುಶ್ ಪಾಂಘಾಲ್ ತಾಯ್ನಾಡಿಗೆ ಮರಳಿದ್ದಾರೆ.
ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಈ ಮೂವರಿಗೂ ಭವ್ಯ ಸ್ವಾಗತ ಕೋರಲಾಯಿತು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜೇತರು, ತಮ್ಮ ಈ ಐತಿಹಾಸಿಕ ಗೆಲುವಿನ ಸಂಭ್ರಮ ಹಾಗೂ ಮುಂದಿನ ಒಲಿಂಪಿಕ್ಸ್ ಕನಸುಗಳನ್ನು ಹಂಚಿಕೊಂಡಿದ್ದಾರೆ.
ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಬಾಕ್ಸರ್ಸ್ 3 ಚಿನ್ನ ಹಾಗೂ 3 ಕಂಚು ಸೇರಿದಂತೆ ಒಟ್ಟು 6 ಪದಕಗಳನ್ನು ಗೆದ್ದು, ಬಾಕ್ಸಿಂಗ್ ಇತಿಹಾಸದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಹುಟ್ಟುಹಬ್ಬದಂದೇ ಚಿನ್ನ ಗೆದ್ದ ಲವ್ಲಿನಾ
ಮಹಿಳೆಯರ 75 ಕೆಜಿ ವಿಭಾಗದಲ್ಲಿ ಚೀನಾದ ಬಾಒ ಜಿಯಿ ಅವರನ್ನು 5-0 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದ ಲವ್ಲಿನಾ ಬೊರ್ಗೊಹೈನ್ ಅವರಿಗೆ ಅಕ್ಟೋಬರ್ 2ರಂದು ಹುಟ್ಟುಹಬ್ಬವಿತ್ತು. ಈ ಬಗ್ಗೆ ಮಾತನಾಡಿದ ಅವರು, ʼನನ್ನ ಬರ್ತ್ಡೇ ದಿನವೇ ಏಷ್ಯನ್ ಗೇಮ್ಸ್ನಲ್ಲಿ ದೇಶಕ್ಕಾಗಿ ಚಿನ್ನ ಗೆದ್ದಿದ್ದು ನನಗೆ ನೀಡಿದೆ. ಕಳೆದ ಬಾರಿ ಬೆಳ್ಳಿ ಗೆದ್ದಿದ್ದೆ, ಈ ಬಾರಿ ಪದಕದ ಬಣ್ಣ ಬದಲಾಯಿಸಬೇಕು ಎಂಬ ಹಠವಿತ್ತು, ಅದು ನೆರವೇರಿದೆ. ಈಗ ನನ್ನ ಸಂಪೂರ್ಣ ಗಮನ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೇಲಿದೆʼ ಎಂದಿದ್ದಾರೆ.
ವಿಶ್ವದ ನಂ. 1 ಬಾಕ್ಸರ್ ಮಣಿಸಿದ ಪರ್ವೀನ್ ಹೂಡಾ
ಕಠಿಣ ಪರಿಸ್ಥಿತಿಗಳನ್ನು ಎದುರಿಸಿ ಬಂದು 65 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದ ಪರ್ವೀನ್ ಹೂಡಾ, ಈ ಗೆಲುವಿನ ಹಿಂದೆ ಅಪಾರ ಪರಿಶ್ರಮವಿದೆ ಎಂದಿದ್ದಾರೆ. ʼಫೈನಲ್ನಲ್ಲಿ ನಾನು ಎದುರಿಸಿದ್ದು ವಿಶ್ವದ ನಂಬರ್ 1 ಹಾಗೂ ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತ ಕ್ರೀಡಾಪಟುವನ್ನು. ಆದರೆ ರಿಂಗ್ ಒಳಗಡೆ ಹೋದಾಗ ಎಲ್ಲರೂ ಮನುಷ್ಯರೇ, ಯಾರನ್ನು ಬೇಕಾದರೂ ಸೋಲಿಸಬಹುದು ಎಂಬ ಧೈರ್ಯ ನನಗಿತ್ತು. ಮೂರನೇ ರೌಂಡ್ನಲ್ಲಿ ನನ್ನ ಸರ್ವಸ್ವವನ್ನು ಪಣಕ್ಕಿಟ್ಟು ಹೋರಾಡಿದೆ, ಗೆಲುವು ನನ್ನದಾಯಿತುʼ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಅಮಿತ್ ಪಾಂಘಾಲ್ ಹಾದಿಯಲ್ಲೇ ಹೆಜ್ಜೆ ಇಟ್ಟ ಅಂಕುಶ್
ಪುರುಷರ 80 ಕೆಜಿ ವಿಭಾಗದಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್-ಸಿಯಾಂಗ್ ಅವರನ್ನು ಸೋಲಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಅಂಕುಶ್ ಪಾಂಘಾಲ್, ಭಾರತಕ್ಕೆ ಚಿನ್ನದ ಗರಿ ತಂದುಕೊಟ್ಟರು. 2018ರ ನಂತರ ಏಷ್ಯನ್ ಗೇಮ್ಸ್ ಬಾಕ್ಸಿಂಗ್ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಪುರುಷ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಅಂಕುಶ್ ಪಾತ್ರರಾಗಿದ್ದಾರೆ. ನಾವು ಈ ಬಾರಿ ಚಿನ್ನ ಗೆಲ್ಲಲೇಬೇಕು ಎಂದು ಅಂದುಕೊಂಡಿದ್ದೆವು ಈಗ ಅದು ನೆರೆವೇರಿದು. ಮುಂದಿನ ವಿಶ್ವ ಚಾಂಪಿಯನ್ಶಿಪ್ ಹಾಗೂ ಒಲಿಂಪಿಕ್ಸ್ ಅರ್ಹತಾ ಪಂದ್ಯಗಳತ್ತ ಗಮನ ಹರಿಸಲಿದ್ದೇನೆ ಎಂದು ಅಂಕುಶ್ ತಿಳಿಸಿದ್ದಾರೆ.
ಭಾರತೀಯ ಬಾಕ್ಸಿಂಗ್ ಫೆಡರೇಶನ್ ಅಧ್ಯಕ್ಷ ಅಜಯ್ ಸಿಂಗ್ ಹಾಗೂ ಮುಖ್ಯ ತರಬೇತುದಾರ ಸ್ಯಾಂಟಿಯಾಗೊ ನೀವಾ ಅವರು ಕ್ರೀಡಾಪಟುಗಳ ಈ ಅದ್ಭುತ ಸಾಧನೆಯನ್ನು ಕೊಂಡಾಡಿದ್ದು, ಉಜ್ಬೇಕಿಸ್ತಾನ್, ಕಜಕಿಸ್ತಾನ್ ಹಾಗೂ ಚೀನಾದಂತಹ ಬಲಿಷ್ಠ ದೇಶಗಳನ್ನು ಹಿಂದಿಕ್ಕಿ ಭಾರತ ಬಾಕ್ಸಿಂಗ್ನಲ್ಲಿ ನಂ.1 ಸ್ಥಾನ ಪಡೆದಿರುವುದು ಐತಿಹಾಸಿಕ ಸಾಧನೆ ಎಂದು ಶ್ಲಾಘಿಸಿದ್ದಾರೆ.



