ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಟೆನಿಸ್ನ ಪ್ರಮುಖ ಆಟಗಾರರು ಭಾಗವಹಿಸಲಿರುವ ವರ್ಲ್ಡ್ ಟೆನಿಸ್ ಲೀಗ್ (WTL) 2026ರ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಬೆಂಗಳೂರಿನ ಕೆಎಸ್ಎಲ್ಟಿಎ, ಎಸ್.ಎಂ. ಕೃಷ್ಣ ಟೆನಿಸ್ ಸ್ಟೇಡಿಯಂನಲ್ಲಿ ಡಿಸೆಂಬರ್ 17ರಿಂದ ನಾಲ್ಕು ದಿನಗಳ ಕಾಲ ಪಂದ್ಯಗಳು ನಡೆಯಲಿವೆ. ನಿಕ್ ಕಿರ್ಗಿಯೋಸ್, ಅಲೆಕ್ಸಾಂಡರ್ ಬುಬ್ಲಿಕ್, ಎಲಿನಾ ಸ್ವಿಟೋಲಿನಾ, ಬೆಲಿಂಡಾ ಬೆನ್ಸಿಕ್ ಮತ್ತು ಕರೋಲಿನಾ ಪ್ಲಿಸ್ಕೋವಾ ಸೇರಿದಂತೆ ಹಲವು ಪ್ರಮುಖ ಆಟಗಾರರು ಈ ಟೂರ್ನಿಯಲ್ಲಿ ಆಡಲಿದ್ದಾರೆ. ನಾಲ್ಕು ತಂಡಗಳ ನಡುವೆ ನಡೆಯಲಿರುವ ಪಂದ್ಯಗಳು ಟೆನಿಸ್ ಅಭಿಮಾನಿಗಳಿಗೆ ಉತ್ತಮ ಪೈಪೋಟಿಯ ರಸದೌತಣ ನೀಡಲಿವೆ.
ಡಿಸೆಂಬರ್ 17ರಂದು ಹಾಕ್ಸ್ ಮತ್ತು ಆಸಿ ಮ್ಯಾವೆರಿಕ್ಸ್ ಕೈಟ್ಸ್ ತಂಡಗಳ ನಡುವಿನ ಪಂದ್ಯದೊಂದಿಗೆ ಲೀಗ್ ಆರಂಭವಾಗಲಿದೆ. ನಂತರ ಎಕ್ರಿಕ್ಸ್ ಈಗಲ್ಸ್ ಮತ್ತು ಗೇಮ್ ಚೇಂಜರ್ಸ್ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಒಲಿಂಪಿಕ್ ಚಿನ್ನದ ಪದಕ ವಿಜೇತೆ ಬೆಲಿಂಡಾ ಬೆನ್ಸಿಕ್ ಮತ್ತು ಮಾಜಿ ವಿಶ್ವ ನಂ. 1 ಆಟಗಾರ್ತಿ ಕರೋಲಿನಾ ಪ್ಲಿಸ್ಕೋವಾ ತಮ್ಮ ತಂಡಗಳನ್ನು ಮುನ್ನಡೆಸಲಿದ್ದಾರೆ. ದಿನದ ಎರಡನೇ ಪಂದ್ಯದಲ್ಲಿ ನಿಕ್ ಕಿರ್ಗಿಯೋಸ್ ನಾಯಕತ್ವದ ಎಕ್ರಿಕ್ಸ್ ಈಗಲ್ಸ್ ತಂಡವು ಎಲಿನಾ ಸ್ವಿಟೋಲಿನಾ ಅವರ ಗೇಮ್ ಚೇಂಜರ್ಸ್ ಫಾಲ್ಕನ್ಸ್ ತಂಡವನ್ನು ಎದುರಿಸಲಿದೆ.
ಡಿಸೆಂಬರ್ 18ರಂದು ಗೇಮ್ ಚೇಂಜರ್ಸ್ ಫಾಲ್ಕನ್ಸ್ ಮತ್ತು ಹಾಕ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸ್ವಿಟೋಲಿನಾ ಮತ್ತು ಬೆನ್ಸಿಕ್ ಅವರ ತಂಡಗಳು ಮುಖಾಮುಖಿಯಾಗಲಿವೆ. ನಂತರ ಆಸಿ ಮ್ಯಾವೆರಿಕ್ಸ್ ಕೈಟ್ಸ್ ಮತ್ತು ಎಕ್ರಿಕ್ಸ್ ಈಗಲ್ಸ್ ತಂಡಗಳು ಸೆಣಸಲಿವೆ. ಈ ಪಂದ್ಯದಲ್ಲಿ ನಿಕ್ ಕಿರ್ಗಿಯೋಸ್ ಮತ್ತು ಅಲೆಕ್ಸಾಂಡರ್ ಬುಬ್ಲಿಕ್ ಎದುರಾಳಿ ತಂಡಗಳ ಪರವಾಗಿ ಆಡಲಿದ್ದಾರೆ.
ಡಿಸೆಂಬರ್ 19ರಂದು ಲೀಗ್ ಹಂತದ ಕೊನೆಯ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯದಲ್ಲಿ ಗೇಮ್ ಚೇಂಜರ್ಸ್ ಫಾಲ್ಕನ್ಸ್ ತಂಡವು ಆಸಿ ಮ್ಯಾವೆರಿಕ್ಸ್ ಕೈಟ್ಸ್ ತಂಡವನ್ನು ಎದುರಿಸಲಿದೆ. ನಂತರ ಎಕ್ರಿಕ್ಸ್ ಈಗಲ್ಸ್ ಮತ್ತು ಹಾಕ್ಸ್ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯಗಳ ಫಲಿತಾಂಶದ ಆಧಾರದ ಮೇಲೆ ಫೈನಲ್ಗೆ ಅರ್ಹತೆ ಪಡೆಯುವ ತಂಡಗಳು ನಿರ್ಧಾರವಾಗಲಿವೆ.
ಟೂರ್ನಿಯ ಚಾಂಪಿಯನ್ಶಿಪ್ ಫೈನಲ್ ಡಿಸೆಂಬರ್ 20ರಂದು ಸಂಜೆ 6 ಗಂಟೆಗೆ ನಡೆಯಲಿದೆ. ಈ ಪಂದ್ಯದೊಂದಿಗೆ ನಾಲ್ಕು ದಿನಗಳ ಟೆನಿಸ್ ಟೂರ್ನಿಗೆ ತೆರೆ ಬೀಳಲಿದೆ.
ಪ್ರಮುಖ ಅಂತರರಾಷ್ಟ್ರೀಯ ಆಟಗಾರರ ಜೊತೆಗೆ ಭಾರತದ ಪ್ರತಿಭಾವಂತ ಆಟಗಾರರೂ ಭಾಗವಹಿಸಲಿರುವ WTL 2026, ಬೆಂಗಳೂರಿನ ಟೆನಿಸ್ ಅಭಿಮಾನಿಗಳಿಗೆ ಉತ್ತಮ ಟೆನಿಸ್ ಅನುಭವ ನೀಡುವ ನಿರೀಕ್ಷೆಯಿದೆ. ಲೀಗ್ ಹಂತದ ಪಂದ್ಯಗಳ ನಂತರ ಚಾಂಪಿಯನ್ ಪಟ್ಟಕ್ಕಾಗಿ ಫೈನಲ್ನಲ್ಲಿ ತಂಡಗಳು ಸೆಣಸಲಿವೆ.
WTL ಸೀಸನ್ 5ರ ಎಲ್ಲಾ ಪಂದ್ಯಗಳನ್ನು ನೇರವಾಗಿ ವೀಕ್ಷಿಸಲು ಡಿಸ್ಟ್ರಿಕ್ಟ್ ಆ್ಯಪ್ ಮೂಲಕ ಟಿಕೆಟ್ಗಳನ್ನು ಕಾಯ್ದಿರಿಸಬಹುದು.



