October 4, 2026
Sunday, October 4, 2026
spot_img

ಕುಂದಗೋಳದ ಗುಡಗೇರಿ ಬಳಿ ರೈಲ್ವೆ ಫ್ಲೈಓವರ್ ಕಾಮಗಾರಿ: ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ಹೊಸದಿಗಂತ ವರದಿ ಕುಂದಗೋಳ:

ತಾಲ್ಲೂಕಿನ ಗುಡಗೇರಿ ಗ್ರಾಮದಲ್ಲಿ ಲಕ್ಷ್ಮೇಶ್ವರ – ಹುಲಗೂರ ರಸ್ತೆ ಮಧ್ಯ ಗುಡಗೇರಿ ಬಳಿ ರೈಲ್ವೆ ಫ್ಲೈ ಓವರ್ ನಿರ್ಮಾಣ ಕಾಮಗಾರಿ, ಸರ್ವಿಸ್ ರಸ್ತೆಗೆ ಅಕ್ಕಪಕ್ಕದ ಮನೆಗಳಿಗೆ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ಗುಡಗೇರಿ ಗ್ರಾಮಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ.

2023 ರಿಂದ ಆರಂಭಗೊಂಡ ಈ ಫ್ಲೈ ಓವರ್ ಕಾಮಗಾರಿಯು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಇಲ್ಲಿನ ನಿವಾಸಿಗಳಿಗೆ ಸಮರ್ಪಕ ಮಾಹಿತಿ ನೀಡದೆ ನಮ್ಮ ಮನೆಗಳನ್ನು ಕೆಡುವುತ್ತಿದ್ದು ಪರಿಹಾರ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ನಿವಾಸಿಗಳು ಆರೋಪಿಸಿದರು. ಈ ಕುರಿತು ಲಿಖಿತವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಸಹ ಇದುವರೆಗೂ ಸಮರ್ಪಕ ಉತ್ತರ ನೀಡಿಲ್ಲ ಎಂದು ನಾವು ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಯ ಕಾಂಪೌಂಡ್ ಹಾಗೂ ಮನೆಗಳನ್ನು ಕೆಡುವುತ್ತಿದ್ದಾರೆ ಈ ಕುರಿತು ಗುತ್ತಿಗೆದಾರರನ್ನು ಕೇಳಿದರೆ ಬೆದರಿಕೆ ಹಾಕಿ ನಮ್ಮನ್ನು ಹೆದರಿಸುತ್ತಿದ್ದಾರೆ. ಎಂದು ವಿರುಪಾಕ್ಷಯ್ಯ ದೇಸಾಯಿ ಆರೋಪಿಸಿದರು.

ಅಪ್ಪಣ್ಣಾ ಹುಂಡೆಕಾರ ಮಾತನಾಡಿ ಮೂರ್ನಾಲ್ಕು ಬಾರಿ ಶಾಸಕರಿಗೆ ಜಿಲ್ಲಾ ಸಹಾಯಕ ಆಯುಕ್ತ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಸಹ ಪರಿಹಾರ ಬಗ್ಗೆ ಸಮರ್ಪಕವಾದ ಉತ್ತರ ನೀಡುತ್ತಿಲ್ಲ. ಸುಮಾರು 70-80 ವರ್ಷಗಳಿಂದ ಬಡ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದು ಅವರಿಗೆ ಪರಿಹಾರ ನೀಡುತ್ತಿಲ್ಲ. ಬಿನ್ ಶೇತಗಿಯಲ್ಲಿ ನಿವೇಶನ ಹಾಗೂ 37 ಮನೆ  ಇದ್ದು. ಇವರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ ಇದುವರೆಗೂ ಪರಿಹಾರ ನೀಡಿಲ್ಲ. ಇನ್ನೂ ಭೂ ಬಾಡಿಗೆಯಲ್ಲಿ 12 ಮತ್ತು ಸರ್ಕಾರಿ ಸರ್ವೆ ಜಾಗದಲ್ಲಿ 9 ಕುಟುಂಬಗಳು ಗ್ರಾಮ ಠಾಣಾ ವ್ಯಾಪ್ತಿಯಲ್ಲಿ 02 ಕುಟುಂಬಗಳು ವಾಸವಾಗಿದ್ದು, ಕೂಲಿ ನಾಲೆ ಮಾಡಿ ಸೋರು ನಿರ್ಮಿಸಿಕೊಂಡಿದ್ದಾರೆ. ಈಗ ಸೋರು ಇಲ್ಲ ನಿವೇಶನವಿಲ್ಲ ಈ ಕುಟುಂಬಗಳು ಬೀದಿಗೆ ಬೀಳುತ್ತಿದ್ದು ಇವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಕಾರರು ಮಾತನಾಡಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸೂಕ್ತ ಪರಿಹಾರ ನೀಡದಿದ್ದರೆ ಲಕ್ಷ್ಮೇಶ್ವರ ಹುಲಗೂರು ರಸ್ತೆ ಬಂದ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು

ಈ ಸಮಯದಲ್ಲಿ ಮಹಿಳೆ ದಿಲ್ ಶಾದ್ ನದಾಫ್ ಆಕ್ರೋಶಭರಿತವಾಗಿ ಮಾತನಾಡಿ, ‘ಕೂಲಿ ನಾಲಿ ಮಾಡಿ ಸೋರು ನಿರ್ಮಿಸಿ ನಿರ್ಮಿಸಿಕೊಂಡವರು ಈಗ ಎಲ್ಲಾ ಕೆಡವಾಕತೆರ್ರಿ ಎನು ಪರಿಹಾರ ಇಲ್ಲ ಅನ್ನಕತಾರಿ ಬೆಂಕಿ ಹಚ್ಚಿಕೊಂಡು ವಿಷ ಸೇವೆನೆ ಮಾಡಿ ನಾವೂ ಸಾಯೋದು ಒಂದೇ ಬಾಕಿ ನೋಡ್ರಿ’ ಎಂದು ತನ್ನ  ಅಳಲು ತೋಡಿಕೊಂಡರು.

ಇದಕ್ಕೂ ಮುನ್ನ ಲಕ್ಷ್ಮೇಶ್ವರ ಹುಲಗೂರು ಸಂಚರಿಸುವ ಸಾರಿಗೆ ಬಸ್ ಅನ್ನು ತಡೆದು ಕೆಲಕಾಲ ಪ್ರತಿಭಟನೆ ಮಾಡಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಜು ತಿಮ್ಮನಗೌಡ್ರ, ಉಮೇಶ್ ಹಿರೇಗೌಡ, ಹನುಮಂತಗೌಡ ಹಿರೇಗೌಡ್ರ, ರವಿರಾಜ್ ಬಸ್ತಿ, ನೂರ್ ಸಾಬ್ ತಹಶೀಲ್ದಾರ್, ಶಿವನಗೌಡ ಬೊಮ್ಮನಗೌಡ್ರ, ರಾಜು ಮಳಲಿ ಸೇರಿದಂತೆ ನೂರಾರು ಜನರಿದ್ದರು.

Must Read