ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದೆ ಲಲಿತಮ್ಮ ನಿಧನರಾಗಿದ್ದಾರೆ. 65 ವರ್ಷ ವಯಸ್ಸಿನ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ‘ಅಮ್ಮನ ಮಡಿಲು’ ಟ್ರಸ್ಟ್‌ನ ಆಶ್ರಮದಲ್ಲಿ ಚಿಕಿತ್ಸೆ ಹಾಗೂ ಆರೈಕೆ ಪಡೆಯುತ್ತಿದ್ದರು.
35 ವರ್ಷಗಳ ಕಲಾ ಸೇವೆ
ಸುಮಾರು 35 ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಲಲಿತಮ್ಮ, ನೂರಾರು ನಾಟಕಗಳು ಹಾಗೂ ರಂಗಪ್ರದರ್ಶನಗಳಲ್ಲಿ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದರು. ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಕಾಲಿಟ್ಟ ಅವರು, ತಮ್ಮ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಅವರ ನಿಧನದಿಂದ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಹಿರಿಯ ಕಲಾವಿದರ ಬಳಗದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ನಟ ದರ್ಶನ್ ಅಭಿನಯದ ಜನಪ್ರಿಯ ‘ಸುಂಟರಗಾಳಿ’ ಚಿತ್ರದಲ್ಲಿನ ‘ಸಾರಾಯಿ ಶಾರದ’ ಪಾತ್ರ ಲಲಿತಮ್ಮ ಅವರ ವೃತ್ತಿಜೀವನದ ಪ್ರಮುಖ ಪಾತ್ರಗಳಲ್ಲಿ ಒಂದಾಗಿತ್ತು. ಈ ಪಾತ್ರದ ಮೂಲಕ ಅವರು ಸಿನಿಪ್ರೇಕ್ಷಕರಿಗೆ ಮತ್ತಷ್ಟು ಪರಿಚಿತರಾದರು. ಪಾತ್ರದ ವಿಶಿಷ್ಟ ನಿರೂಪಣೆ ಹಾಗೂ ಸಹಜ ಅಭಿನಯದಿಂದ ‘ಸಾರಾಯಿ ಶಾರದ’ ಪಾತ್ರ ಪ್ರೇಕ್ಷಕರ ನೆನಪಿನಲ್ಲಿ ಉಳಿಯುವಂತಾಯಿತು.
ಇದನ್ನೂ ಓದಿ:
ಜನಪ್ರಿಯ ಸಿನಿಮಾ, ಧಾರಾವಾಹಿಗಳಲ್ಲಿ ನಟನೆ
ಲಲಿತಮ್ಮ ಅವರು ‘ರಂಗೋಲಿ’, ‘ಮಾಂಗಲ್ಯ’, ‘ಮಹಾಮಾಯಿ’ ಸೇರಿದಂತೆ ಹಲವು ಕಿರುತೆರೆ ಧಾರಾವಾಹಿಗಳಲ್ಲೂ ಅಭಿನಯಿಸಿದ್ದರು. ‘ಜಂಗ್ಲೀ’, ‘ಜಾಕಿ’, ‘ವಜ್ರಕಾಯ’, ‘ಜಂಗ್ಲಿ ಕಿತ್ತೂರು’, ‘ಪುತ್ರ’ ಸೇರಿದಂತೆ ವಿವಿಧ ಸಿನಿಮಾಗಳಲ್ಲೂ ತಮ್ಮ ಅಭಿನಯದ ಛಾಪು ಮೂಡಿಸಿದ್ದರು.
ಕಳೆದ ಕೆಲ ವರ್ಷಗಳಿಂದ ಆರೋಗ್ಯ ಸಮಸ್ಯೆಗಳಿಂದಾಗಿ ಅವರು ಗಾಲಿಕುರ್ಚಿಗೆ ಸೀಮಿತರಾಗಿದ್ದರು. ಇತ್ತೀಚೆಗೆ ಪಾರ್ಶ್ವವಾಯು (ಸ್ಟ್ರೋಕ್)ಗೆ ಒಳಗಾಗಿದ್ದ ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿತ್ತು. ಕುಟುಂಬದ ಆರೈಕೆಯ ಕೊರತೆಯ ಹಿನ್ನೆಲೆಯಲ್ಲಿ ‘ಅಮ್ಮನ ಮಡಿಲು’ ಟ್ರಸ್ಟ್‌ನಲ್ಲಿ ಅವರಿಗೆ ಅಗತ್ಯ ಆರೈಕೆ ಒದಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ರಂಗಭೂಮಿಯ ಮೇಲಿನ ದೀರ್ಘಕಾಲದ ಸೇವೆ, ನೂರಾರು ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ನೀಡಿದ ಮನರಂಜನೆ ಹಾಗೂ ಮರೆಯಲಾಗದ ಪಾತ್ರಗಳ ಮೂಲಕ ಲಲಿತಮ್ಮ ಕನ್ನಡ ಕಲಾಲೋಕದಲ್ಲಿ ತಮ್ಮದೇ ಸ್ಥಾನ ಪಡೆದಿದ್ದರು.



