ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಧಾರಾಪುರಂ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಅಂತಿಮ ದಿನವಾದ ಭಾನುವಾರ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಬೃಹತ್ ರೋಡ್ ಶೋ ನಡೆಸುವ ಮೂಲಕ ತಮ್ಮ ಎರಡನೇ ಹಂತದ ಚುನಾವಣಾ ಪ್ರಚಾರಕ್ಕೆ ಅದ್ಧೂರಿ ತೆರೆ ಎಳೆದಿದ್ದಾರೆ. ಪಕ್ಷದ ಅಭ್ಯರ್ಥಿ ಪಿ. ಸತ್ಯಭಾಮಾ ಪರವಾಗಿ ಮತ ಯಾಚಿಸಲು ಹಮ್ಮಿಕೊಳ್ಳಲಾಗಿದ್ದ ಈ ರೋಡ್ ಶೋನಲ್ಲಿ ಸಾವಿರಾರು ಬೆಂಬಲಿಗರು ಭಾಗವಹಿಸಿದ್ದರು.
ಧಾರಾಪುರಂನಿಂದ ಮೂಲನೂರ್‌ವರೆಗೆ ಸುಮಾರು 40 ಕಿ.ಮೀ.ಗಳಿಗೂ ಹೆಚ್ಚು ಉದ್ದದ ಮಾರ್ಗದಲ್ಲಿ ಈ ಬೃಹತ್ ರೋಡ್ ಶೋ ಸಾಗಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಎತ್ತಿನ ಗಾಡಿಯನ್ನು ಓಡಿಸುವ ಮೂಲಕ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆದರು. ಅಕ್ಟೋಬರ್ 6 ರಂದು ನಡೆಯಲಿರುವ ಈ ಉಪಚುನಾವಣೆಯಲ್ಲಿ ತಮ್ಮ ಪಕ್ಷವು ʼಐತಿಹಾಸಿಕ ಜಯʼ ದಾಖಲಿಸಲಿದೆ ಎಂದು ವಿಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
ಇತ್ತೀಚೆಗಷ್ಟೇ ಪ್ರಚಾರದ ವೇಳೆ ಡಿಎಂಕೆ ಮುಖ್ಯಸ್ಥ ಎಂ. ಕೆ. ಸ್ಟಾಲಿನ್ ಅವರು ಟಿವಿಕೆ ಅಭ್ಯರ್ಥಿ ಸತ್ಯಭಾಮಾ ಅವರ ವಿರುದ್ಧ ವೈಯಕ್ತಿಕ ಹಾಗೂ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದ ಸಿ. ಜೋಸೆಫ್ ವಿಜಯ್, ʼಮಹಿಳೆಯರ ವಿರುದ್ಧದ ಇಂತಹ ನಿಂದನಾತ್ಮಕ ರಾಜಕಾರಣವನ್ನು ಸಹಿಸುವುದಿಲ್ಲʼ ಎಂದು ತೀವ್ರವಾಗಿ ಖಂಡಿಸಿದ್ದರು. ರೋಡ್ ಶೋ ಮುಕ್ತಾಯದ ನಂತರ ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ ಕೊಯಮತ್ತೂರಿಗೆ ನಿರ್ಗಮಿಸಿದರು. ಈ ಕ್ಷೇತ್ರದ ಮತ ಎಣಿಕೆಯು ಅ. 9 ರಂದು ನಡೆಯಲಿದೆ.



