October 4, 2026
Sunday, October 4, 2026
spot_img

ಏಷ್ಯನ್ ಗೇಮ್ಸ್‌: ಸೌರಭ್ ಚೌಧರಿ ದಾಖಲೆ ಮುರಿದು ಹೊಸ ಚರಿತ್ರೆ ಬರೆದ ವೈಭವ್ ಸೂರ್ಯವಂಶಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯನ್ ಕ್ರೀಡಾಕೂಟದ ಕ್ರಿಕೆಟ್ ಅಖಾಡದಲ್ಲಿ ಭಾರತೀಯ ಕ್ರಿಕೆಟ್ ತಂಡ ತನ್ನ ಸಾರ್ವಭೌಮತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಟೀಮ್ ಇಂಡಿಯಾ, ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಕ್ರಿಕೆಟ್ ತಂಡ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದು ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಈ ಸ್ಮರಣೀಯ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ 15 ವರುಷದ ಯುವ ಉದಯೋನ್ಮುಖ ಆರಂಭಿಕ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಕೂಡ ಕಣಕ್ಕಿಳಿದಿದ್ದರು. ಈ ಕ್ರೀಡಾಕೂಟದಲ್ಲಿ ವೈಭವ್ ಬ್ಯಾಟ್‌ನಿಂದ ರನ್‌ಗಳು ಬರದಿದ್ದರೂ, ಅವರು ಸಾಧಿಸಿದ ದಾಖಲೆ ಮಾತ್ರ ಇಡೀ ಕ್ರೀಡಾಲೋಕವೇ ಹೆಮ್ಮೆಪಡುವಂತದ್ದು. ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲೇ ಭಾರತದ ಪರ ಚಿನ್ನದ ಪದಕ ಗೆದ್ದ ಅತ್ಯಂತ ಕಿರಿಯ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ವೈಭವ್ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ಈ ದಾಖಲೆಯು ಶೂಟರ್ ಸೌರಭ್ ಚೌಧರಿ ಹೆಸರಿನಲ್ಲಿತ್ತು. ಸೌರಭ್ ಅವರು 2018ರ ಏಷ್ಯನ್ ಕ್ರೀಡಾಕೂಟದಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಚಿನ್ನದ ಪದಕ ಗೆದ್ದು ಈ ಸಾಧನೆ ಮಾಡಿದ್ದರು. ಇದೀಗ 15ರ ಹರೆಯದಲ್ಲೇ ಚಿನ್ನದ ಪದಕಕ್ಕೆ ಕೊರಳು ಒಡ್ಡುವ ಮೂಲಕ ವೈಭವ್, ಸೌರಭ್ ಅವರ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರದ ಪದಕ ಮುಡಿಗೇರಿಸಿಕೊಂಡು ತವರಿಗೆ ಮರಳುತ್ತಿರುವ ಶ್ರೇಯಸ್ ಪಡೆಗೆ ವಿಶ್ರಾಂತಿಯಿಲ್ಲ. ಅಕ್ಟೋಬರ್ 6 ರಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ 5 ಪಂದ್ಯಗಳ ರೋಚಕ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಭಾಗವಹಿಸಲಿದೆ.

Must Read