October 4, 2026
Sunday, October 4, 2026
spot_img

ಸತತ ಎರಡನೇ ಚಿನ್ನಕ್ಕೆ ಮುತ್ತಿಕ್ಕಿದ ಭಾರತ: ಮಹಾ ಕಾಳಗಕ್ಕೆ ಕೋಟಿ ಕೋಟಿ ಪ್ರೇಕ್ಷಕರು ಫಿದಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನ ನಡುವಿನ ಯಾವುದೇ ಕ್ರೀಡಾ ಪಂದ್ಯವಿರಲಿ, ಅದು ಕೇವಲ ಆಟವಲ್ಲ, ಅಭಿಮಾನಿಗಳ ಪಾಲಿಗೆ ಅದೊಂದು ಹಬ್ಬ. ಮೈದಾನದಲ್ಲಿ ಆಟಗಾರರ ನಡುವೆ ತೀವ್ರ ಪೈಪೋಟಿ ನಡೆದರೆ, ಮೈದಾನದ ಹೊರಗೆ ಅಸಂಖ್ಯಾತ ಅಭಿಮಾನಿಗಳು ಸ್ಕ್ರೀನ್ ಮುಂದೆ ಕುಳಿತಿರುತ್ತಾರೆ. ಈ ಕ್ರೇಜ್‌ನಿಂದಾಗಿ ಪ್ರಸಾರಕರಿಗೆ ಮತ್ತು ಆಯೋಜಕರಿಗೆ ಬಂಪರ್ ಆದಾಯ ಹರಿದುಬರುವುದು ಹೊಸದೇನಲ್ಲ. ಇದೀಗ 2026ರ ಜಪಾನ್‌ನ ಐಚಿ-ನಗೋಯಾ ಏಷ್ಯನ್ ಗೇಮ್ಸ್‌ನಲ್ಲಿ ಇದು ಮತ್ತೊಮ್ಮೆ ಅಕ್ಷರಶಃ ಸಾಬೀತಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಪುರುಷರ ಕ್ರಿಕೆಟ್ ಫೈನಲ್ ಹಾಗೂ ಹಾಕಿ ಸೆಮಿಫೈನಲ್ ಪಂದ್ಯಗಳು ಏಷ್ಯನ್ ಗೇಮ್ಸ್ ಇತಿಹಾಸದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಪಂದ್ಯಗಳು ಎಂಬ ಸಾರ್ವಕಾಲಿಕ ದಾಖಲೆ ಬರೆದಿವೆ ಎಂದು ಏಷ್ಯಾ ಒಲಿಂಪಿಕ್ ಕೌನ್ಸಿಲ್ ಅಧಿಕೃತವಾಗಿ ಘೋಷಿಸಿದೆ.

ಅಕ್ಟೋಬರ್ 3 ರಂದು ನಡೆದ ಪುರುಷರ ಟಿ20 ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಪಡೆ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 211 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಭಾರತದ ಪರ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದ ಅಭಿಷೇಕ್ ಶರ್ಮಾ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿ 61 ರನ್ ಸಿಡಿಸಿದರೆ, ಕೊನೆಯ ಹಂತದಲ್ಲಿ ತಿಲಕ್ ವರ್ಮಾ 22 ಎಸೆತಗಳಲ್ಲಿ ಅಜೇಯ 51 ರನ್ ಬಾರಿಸಿ ಮಿಂಚಿದರು.

ಬೃಹತ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಹಸನ್ ನವಾಜ್ (96 ರನ್) ದಿಟ್ಟ ಹೋರಾಟ ನೀಡಿದರಾದರೂ, ಭಾರತೀಯ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಮುಂದೆ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 192 ರನ್‌ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ 19 ರನ್‌ಗಳ ರೋಚಕ ಜಯ ಸಾಧಿಸಿದ ಭಾರತ ತಂಡ, ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಕ್ರಿಕೆಟ್ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

ಕ್ರಿಕೆಟ್ ಫೈನಲ್‌ಗೆ ಒಂದು ದಿನ ಮೊದಲು ನಡೆದ ಪುರುಷರ ಹಾಕಿ ಸೆಮಿಫೈನಲ್ ಸಮರವು ಆರಂಭದಲ್ಲಿ 3-0 ಮುನ್ನಡೆ ಸಾಧಿಸಿದ್ದ ಭಾರತಕ್ಕೆ, ಪಾಕಿಸ್ತಾನ ತಂಡವು ಕಂಬ್ಯಾಕ್ ಮಾಡಿ 3-3 ಸಮಬಲ ತಂದುಕೊಟ್ಟು ತೀವ್ರ ಆತಂಕ ಸೃಷ್ಟಿಸಿತ್ತು. ಆದರೆ ಪಂದ್ಯದ ಕೊನೆಯ ನಿಮಿಷದಲ್ಲಿ ಅಭಿಷೇಕ್ ಬಾರಿಸಿದ ನಿರ್ಣಾಯಕ ಗೋಲಿನ ನೆರವಿನಿಂದ ಭಾರತ 4-3 ಅಂತರದಿಂದ ಪಾಕಿಸ್ತಾನವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಆ ಬಳಿಕ ನಡೆದ ಫೈನಲ್ ಕಾದಾಟದಲ್ಲಿ ಭಾರತೀಯ ಹಾಕಿ ಪಡೆ ಮಲೇಷ್ಯಾವನ್ನು 5-1 ಅಂತರದಿಂದ ಭರ್ಜರಿಯಾಗಿ ಸೋಲಿಸಿ ಚಿನ್ನದ ಪದಕವನ್ನು ತನ್ನಲ್ಲೇ ಉಳಿಸಿಕೊಂಡಿತು. ಇದು ಪುರುಷರ ಹಾಕಿಯಲ್ಲಿ ಭಾರತಕ್ಕೆ ಒಲಿದ ಐದನೇ ಏಷ್ಯನ್ ಗೇಮ್ಸ್ ಚಿನ್ನದ ಪದಕವಾಗಿದೆ.

ಒಸಿಎ ಸಮನ್ವಯ ಸಮಿತಿ ಅಧ್ಯಕ್ಷ ತಯ್ಯಬ್ ಇಕ್ಬಾಲ್ ಅವರ ಪ್ರಕಾರ, ಈ ಎರಡೂ ಪಂದ್ಯಗಳು ಪ್ರಸಾರ ಇತಿಹಾಸದಲ್ಲೇ ಗರಿಷ್ಠ ಟಿಆರ್‌ಪಿ ಪಡೆದುಕೊಂಡಿವೆ. ಮೊದಲು ಹಾಕಿ ಸೆಮಿಫೈನಲ್ ಸಾರ್ವಕಾಲಿಕ ವೀಕ್ಷಣೆ ದಾಖಲೆ ಬರೆದರೆ, ಮರುದಿನವೇ ಕ್ರಿಕೆಟ್ ಫೈನಲ್ ಪಂದ್ಯವು ಆ ದಾಖಲೆಯನ್ನು ಮುರಿದು ಪ್ರಥಮ ಸ್ಥಾನಕ್ಕೇರಿತು. ಕೌನ್ಸಿಲ್ ನಿಖರವಾದ ವೀಕ್ಷಕರ ಸಂಖ್ಯೆಯನ್ನು ಬಹಿರಂಗಪಡಿಸದಿದ್ದರೂ, ಪ್ರಸಾರಕರ ಆದಾಯದಲ್ಲಿ ಅಭೂತಪೂರ್ವ ಏರಿಕೆ ಕಂಡಿದೆ ಎಂದು ತಿಳಿಸಿದೆ.

Must Read