October 4, 2026
Sunday, October 4, 2026
spot_img

ನೆಕ್ಸ್ಟ್ ಟಾರ್ಗೆಟ್ ನ್ಯೂಜಿಲೆಂಡ್! ಮೈದಾನಕ್ಕೆ ರೋಹಿತ್-ಕೊಹ್ಲಿ ರೀ-ಎಂಟ್ರಿ ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಕ್ರಿಕೆಟ್ ಪ್ರೇಮಿಗಳು ನಿರೀಕ್ಷಿಸಿದಂತೆಯೇ ಟೀಂ ಇಂಡಿಯಾ ಮೂರು ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಏಕದಿನ ಸರಣಿಯ ಜಯದ ಉತ್ಸಾಹದಲ್ಲಿರುವ ಭಾರತ ತಂಡ, ಇದೀಗ ಕ್ಯಾರಿಬಿಯನ್ ಪಡೆಯ ವಿರುದ್ಧ ಐದು ಪಂದ್ಯಗಳ ರೋಚಕ ಟಿ20 ಸರಣಿಗೆ ಸಜ್ಜಾಗಿದೆ. ಆದರೆ, ಈ ಟಿ20 ಸರಣಿಯಲ್ಲಿ ಭಾರತದ ಸಂಪೂರ್ಣ ವಿಭಿನ್ನ ಹಾಗೂ ಯುವ ಪಡೆ ಅಖಾಡಕ್ಕಿಳಿಯಲಿದೆ.

ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ಟಿ20 ಸರಣಿಯಲ್ಲಿ ಕಾಣ ಸಿಗುವುದಿಲ್ಲ. ಇವರಿಬ್ಬರೂ ಈಗಾಗಲೇ ಟಿ20 ಅಂತಾರಾಷ್ಟ್ರೀಯ ಮಾದರಿಗೆ ವಿದಾಯ ಹೇಳಿರುವುದು ಇದಕ್ಕೆ ಮುಖ್ಯ ಕಾರಣ. ಹೀಗಾಗಿ, ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಈ ದಿಗ್ಗಜ ಬ್ಯಾಟರ್‌ಗಳ ಅಬ್ಬರವನ್ನು ಕಣ್ತುಂಬಿಕೊಳ್ಳಲು ಸಾಧ್ಯವಿಲ್ಲ.

ಟಿ20 ಸರಣಿಯಿಂದ ರೋಹಿತ್ ಮತ್ತು ವಿರಾಟ್ ಹೊರಗುಳಿದ ಬೆನ್ನಲ್ಲೇ, “ಈ ಇಬ್ಬರು ದಿಗ್ಗಜರನ್ನು ಮತ್ತೆ ಭಾರತೀಯ ಜೆರ್ಸಿಯಲ್ಲಿ ಮೈದಾನದಲ್ಲಿ ನೋಡುವುದು ಯಾವಾಗ?” ಎಂಬ ಪ್ರಶ್ನೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳನ್ನು ಕಾಡತೊಡಗಿದೆ. ಈ ಕಾಯುವಿಕೆಗೆ ಈಗ ಸ್ಪಷ್ಟ ಉತ್ತರ ಸಿಕ್ಕಿದ್ದು, ಅಭಿಮಾನಿಗಳು ಇನ್ನೊಂದು ತಿಂಗಳು ತಾಳ್ಮೆಯಿಂದ ಕಾಯಬೇಕಾಗಿದೆ.

ಕಳೆದ ವರುಷದಿಂದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೇವಲ ಏಕದಿನ ಮಾದರಿಯ ಪಂದ್ಯಗಳಲ್ಲಿ ಮಾತ್ರ ಸಕ್ರಿಯವಾಗಿ ಆಡುತ್ತಿದ್ದಾರೆ. ಮುಂದಿನ ವರುಷ ಏಕದಿನ ವಿಶ್ವಕಪ್ ಟೂರ್ನಿ ಇರುವುದರಿಂದ, ಈ ಒಂದು ವರುಷದ ಅವಧಿಯಲ್ಲಿ ಟೀಂ ಇಂಡಿಯಾ ಹಲವಾರು ಏಕದಿನ ಸರಣಿಗಳನ್ನು ಆಡಲು ವೇಳಾಪಟ್ಟಿ ಸಿದ್ಧಪಡಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಇವರಿಬ್ಬರ ಜುಗಲ್ಬಂದಿಯನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

ನ್ಯೂಜಿಲೆಂಡ್‌ನಲ್ಲಿ ಭಾರತ ಮತ್ತು ಆತಿಥೇಯ ಪಡೆಯ ನಡುವೆ ಒಟ್ಟು 5 ಏಕದಿನ ಪಂದ್ಯಗಳ ರೋಚಕ ಸರಣಿ ನಡೆಯಲಿದೆ. ನವೆಂಬರ್ 4 ರಿಂದ ನವೆಂಬರ್ 15 ರವರೆಗೆ ಈ ಸರಣಿ ಆಯೋಜನೆಯಾಗಲಿದ್ದು, ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಹಾಗೂ ‘ಕಿಂಗ್’ ಕೊಹ್ಲಿ ತಮ್ಮ ಬ್ಯಾಟಿಂಗ್ ಪರಾಕ್ರಮ ಪ್ರದರ್ಶಿಸಲು ಪೂರ್ಣ ಪ್ರಮಾಣದಲ್ಲಿ ಸಜ್ಜಾಗಲಿದ್ದಾರೆ.

Must Read