October 4, 2026
Sunday, October 4, 2026
spot_img

ಕ್ಯಾ.ಸ್ಮಿತ್ ಬಗ್ಗೆ ಒಂದೇ ಒಂದು ಹೇಳಿಕೆ, ಪೋಸ್ಟ್ ಇಲ್ಲ: ಕಾಂಗ್ರೆಸಿಗೆ ಬಿಜೆಪಿ ಚಾಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದುಬೈ-ಟೆಲ್ ಅವೀವ್ ನಡುವೆ ಸಂಚರಿಸುತ್ತಿದ್ದ ವಿಮಾನದಲ್ಲಿ ಸಹ ಪೈಲಟ್‌ನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡರೂ ಜನರ ಜೀವವುಳಿಸುವಲ್ಲಿ ಧೈರ್ಯ ತೋರಿದ ಕ್ಯಾ.ಸ್ಮಿತ್ ಮಚ್ಚಾರ್ ಬಗ್ಗೆ ಒಂದೇ ಒಂದು ಹೇಳಿಕೆಯಾಗಲಿ, ಪೋಸ್ಟ್‌ನ್ನು ಆಗಲಿ ಮಾಡದೆ “ಮೌನ”ವಹಿಸಿದ ಕಾಂಗ್ರೆಸ್ ನಾಯಕತ್ವ ಯಾವ ಮಟ್ಟಕ್ಕೆ ಇಳಿದಿದೆ ಎಂಬುದನ್ನು ಎತ್ತಿತೋರಿದೆ ಎಂದು ಬಿಜೆಪಿ ಭಾನುವಾರ ಕುಟುಕಿದೆ.

ಬಿಜೆಪಿ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಸುದ್ದಿಗಾರರ ಜೊತೆ ಮಾತನಾಡಿ, ಈ ಘಟನೆ ರಾಷ್ಟ್ರೀಯ ಹೆಮ್ಮೆಯ ಸನ್ನಿವೇಶವಿದು. ಆದರೆ ಹಿರಿಯ ಕಾಂಗ್ರೆಸ್ ನಾಯಕರು ಕ್ಯಾ.ಮಚ್ಚಾರ್ ಅವರ ಧೈರ್ಯ-ಸಾಹಸದ ಬಗ್ಗೆ ಚಕಾರವೆತ್ತದೆ ಇರುವುದು ವಿಪರ್ಯಾಸ. “ಭಾರತಕ್ಕೆ ಈ ಒಂದು ಸಂದರ್ಭ ಅತ್ಯಂತ ಅಭಿಮಾನದ್ದಾಗಿದೆ. ಆದರೆ ಕೆಲವು ಸಂದರ್ಭಗಳು ನಾಚಿಕೆಗೇಡಿನದ್ದೂ ಆಗಿವೆ. ತನ್ನ ಪ್ರಾಣವನ್ನು ಪಣಕ್ಕಿಟ್ಟು ನೂರಾರು ಜೀವಗಳನ್ನು ಉಳಿಸಿದ ಕ್ಯಾ.ಸ್ಮಿತ್ ಮಚ್ಚಾರ್ ಬಗ್ಗೆ ಕಾಂಗ್ರೆಸ್ ಕುಟುಂಬದಿಂದ ಒಂದೇ ಒಂದು ಪೋಸ್ಟ್ ಆಗಲಿ, ಒಂದೇ ಒಂದು ಶಬ್ದವಾಗಲಿ ಅಥವಾ ಒಂದೇ ಒಂದು ಪತ್ರಿಕಾ ಹೇಳಿಕೆಯಾಗಲಿ ಹೊರಬಿದ್ದಿಲ್ಲ ಎಂಬುದು ಇಂತಹ ನಾಚಿಕೆಗೇಡಿನ ಸಂದರ್ಭವಾಗಿದೆ. ಇದು ಅತ್ಯಂತ ಗಂಭೀರ ಪ್ರಶ್ನೆಯನ್ನೂ ಎತ್ತಿದೆ ಎಂದು ಅವರು ಕಾಂಗ್ರೆಸ್ ನಾಯಕರ ನಿಲುವಿಗೆ ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು.

ಕ್ಯಾ.ಮಚ್ಚಾರ್ ಅವರು ಬುಧವಾರ 175ಪ್ರಯಾಣಿಕರಿದ್ದ ಫ್ಲೈದುಬೈ ವಿಮಾನವನ್ನು ಚಲಾಯಿಸುತ್ತಿದ್ದಾಗ ಸಹ ಪೈಲಟ್ ಹಮಾಮ್ ಅಲ್ -ಹಮ್ಮಾಮಿ ಏಕಾಏಕಿ ದಾಳಿ ನಡೆಸಿ ವಿಧ್ವಂಸಕ ಕೃತ್ಯಕ್ಕೆ ಮುಂದಾದಾಗ ವಿಮಾನ ಅತ್ಯಂತ ಅಪಾಯಕ್ಕೆ ಸಿಲುಕಿತ್ತು. ಆದರೆ ಗಂಭೀರ ಗಾಯಗೊಂಡರೂ ಕಾಕ್‌ಪಿಟನ್ನು ತೆರೆದು ವಿಮಾನವನ್ನು ಆಪತ್ತಿನಿಂದ ಪಾರುಮಾಡುವಲ್ಲಿ ದಿಟ್ಟತನ ತೋರಿದ್ದರು. ಬಳಿಕ ವಿಮಾನವು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ಇಳಿದಿತ್ತು.

ಪ್ರಧಾನಿ ನರೇಂದ್ರ ಮೋದಿ ಮತ್ತು ಜಗತ್ತಿನ ನಾಯಕರು ಮಚ್ಚಾರ್ ಅವರ ದಿಟ್ಟತನವನ್ನು ಶ್ಲಾಘಿಸುತ್ತಿದ್ದರೆ ಕಾಂಗ್ರೆಸ್ ನಾಯಕತ್ವ ನಿಗೂಢ ಮೌನ ತೋರಿರುವುದು ಆಘಾತಕಾರಿಯಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಇದರಲ್ಲೂ ರಾಜಕೀಯ ಲೆಕ್ಕಾಚಾರ ಹೊಂದಿ ಪ್ರತಿಕ್ರಿಯಿಸದೆ ಮೌನವಾಗಿದ್ದಾರೆ. ಒಂದು ಕಾಲದಲ್ಲಿ ಗಾಜಾ ಘಟನೆಯಿಂದ ತುಂಬಾ ನೊಂದಿದ್ದ ಗಾಂಧಿ ಕುಟುಂಬದ ‘ದಾರಿತಪ್ಪಿದ ರಾಜಕುಮಾರ ’ರಾಹುಲ್‌ಗಾಂಧಿ ಇಂದು ವೋಟ್‌ಬ್ಯಾಂಕ್‌ನ ಬಗ್ಗೆ ಅದೆಷ್ಟು ಭಯಭೀತರಾಗಿದ್ದಾರೆಂದರೆ, ಕ್ಯಾ.ಸ್ಮಿತ್ ಅವರ ಶೌರ್ಯವನ್ನು ಶ್ಲಾಘಿಸಲು ಒಂದೇ ಒಂದು ಪದವನ್ನು ಹೇಳಲೂ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಸುಧಾಂಶು ತ್ರಿವೇದಿ ಬೊಟ್ಟು ಮಾಡಿದರು.

ಭಯೋತ್ಪಾದನೆ ಬಗ್ಗೆ “ಮೌನ ಬೆಂಬಲ “ನೀಡುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕತ್ವ ಜನತೆಗೆ ಉತ್ತರ ನೀಡಬೇಕೆಂದು ಅವರು ಆಗ್ರಹಿಸಿದರು.

ಉತ್ತರಪ್ರದೇಶದಲ್ಲಿ ನಾಯಕತ್ವ ಬದಲಾವಣೆಗೈದ ಕಾಂಗ್ರೆಸ್‌ನ ನಡೆಯನ್ನು ಉಲ್ಲೇಖಿಸಿದ ಅವರು, ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಮಹಾತ್ಮಾ ಗಾಂಧಿ ಅವರ ಜಯಂತಿಯಂದೇ, ಕಾಂಗ್ರೆಸ್ ಉತ್ತರಪ್ರದೇಶದಲ್ಲಿ ಅಜಯ್ ರೈ ಅವರನ್ನು ಬದಲಿಸಿ, ಪ್ರಧಾನಿ ಮೋದಿಯವರನ್ನು ಚೂರುಚೂರಾಗಿ ಕತ್ತರಿಸಿ ಹಾಕುವೆ ಎಂದಿದ್ದ ಕುಖ್ಯಾತ ಇಮ್ರಾನ್ ಮಸೂದ್‌ರನ್ನು ಕಾಂಗ್ರೆಸ್ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿದೆ. ಹಾಗೆಯೇ ಭಾರತ್ ಮಾತಾ ಕೀ ಜೈ ಎಂದು ಕೂಗುತ್ತಿದ್ದ ಪಕ್ಷ ಕಾರ್ಯಕರ್ತರನ್ನೇ ತಡೆದ ಆರಾಧನಾ ಮಿಶ್ರಾ ಅವರನ್ನು ನೂತನ ಕಾಂಗ್ರೆಸ್ ಅಧ್ಯಕ್ಷರನ್ನಾಗಿಸಿದೆ. ಕಾಂಗ್ರೆಸಿನ ಈ ಕ್ರಮವೇ ಮಹಾತ್ಮಾ ಗಾಂಧಿ ಮತ್ತು ಈ ಗಾಂಧಿ ಕುಟುಂಬದ ನಡುವೆ ಅದೆಷ್ಟು ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ಸಾರಿ ಹೇಳುತ್ತದೆ ಎಂದರು.

Must Read