October 4, 2026
Sunday, October 4, 2026
spot_img

ಭಾರತಕ್ಕೆ ಮುಂದಿನ ದಶಕಗಳಲ್ಲಿ ಭಾರೀ ಪ್ರಗತಿ, ಮಾನವ ಕುಲಕ್ಕೆ ಎಐ ಕೊಡುಗೆ: ಜೈಶಂಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತವು ಮುಂದಿನ ಹಲವಾರು ದಶಕಗಳ ಕಾಲ ಭಾರೀ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಭರವಸೆ ವ್ಯಕ್ತಪಡಿಸಿದ್ದಾರೆ. ಮ್ಯೂನಿಚ್ ಲೀಡರ್ಸ್ ಸಭೆಯಲ್ಲಿ ಜಾಗತಿಕ ರಾಜತಾಂತ್ರಿಕತೆ ಮತ್ತು ತಂತ್ರಜ್ಞಾನದ ಭವಿಷ್ಯದ ಬಗ್ಗೆ ಮಾತನಾಡಿದ ಅವರು, ಕೃತಕ ಬುದ್ಧಿಮತ್ತೆ (AI) ಮತ್ತು ಬ್ರಿಕ್ಸ್ (BRICS) ಒಕ್ಕೂಟದ ವಿಸ್ತರಣೆಯು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವವನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ವಿವರಿಸಿದ್ದಾರೆ.

ನಮ್ಮ ಯುವ ಶಕ್ತಿಯೇ ದೇಶದ ದೊಡ್ಡ ಬಲ

ವಿಶ್ವದ ಹಲವು ರಾಷ್ಟ್ರಗಳ ನಡುವೆ ಭಾರತದ ಹಾದಿ ವಿಭಿನ್ನವಾಗಿದೆ. ನಮ್ಮಲ್ಲಿರುವ ಯುವ ಜನಸಂಖ್ಯೆಯ ಬಲವು ಮುಂದಿನ ದಶಕಗಳ ಸುದೀರ್ಘ ಬೆಳವಣಿಗೆಗೆ ದೊಡ್ಡ ಶಕ್ತಿಯಾಗಲಿದೆ ಎಂದರು. ಭಾರತವು ಸಾಂಪ್ರದಾಯಿಕ ಕೈಗಾರಿಕೀಕರಣದ ಹಳೆಯ ಹಾದಿಯನ್ನೇ ಹಿಡಿಯಬೇಕಾಗಿಲ್ಲ. ಇಂದಿನ ಸೃಜನಶೀಲ ಜಗತ್ತಿಗೆ ತಕ್ಕಂತೆ ಹೊಸ ಆವಿಷ್ಕಾರಗಳ ಮೂಲಕವೇ ನಾವು ಮುನ್ನಡೆಯಬಹುದು ಎಂದು ಅವರು ಪ್ರತಿಪಾದಿಸಿದರು.

ಜನರ ಕಲ್ಯಾಣಕ್ಕಾಗಿ ಕೃತಕ ಬುದ್ಧಿಮತ್ತೆ

ತಂತ್ರಜ್ಞಾನದ ಬಳಕೆಯ ಬಗ್ಗೆ ಮನಬಿಚ್ಚಿ ಮಾತನಾಡಿದ ಸಚಿವರು, ಭಾರತವು ಡಿಜಿಟಲ್ ವ್ಯವಸ್ಥೆಯನ್ನು ಬಳಸಿಕೊಂಡು ಈಗಾಗಲೇ ಆಡಳಿತದಲ್ಲಿ ಮತ್ತು ಜನರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದೆ ಎಂದರು. ʼನಮ್ಮ ಪಾಲಿಗೆ AI ಎನ್ನುವುದು ಕೇವಲ ವ್ಯಾಪಾರದ ವಸ್ತುವಲ್ಲ. ಅದು ಜನಸಾಮಾನ್ಯರಿಗೆ ಸುಲಭವಾಗಿ ಸಿಗುವಂತಾಗಬೇಕು, ಅವರ ಕೈಗೆಟುಕುವಂತಿರಬೇಕು ಮತ್ತು ಅವರ ದಿನನಿತ್ಯದ ಅಗತ್ಯಗಳಿಗೆ ನೆರವಾಗಬೇಕು. ಇದನ್ನೇ ನಾವು ‘ಮಾನವೀಯತೆಗಾಗಿ ಎಐ’ ಎನ್ನುತ್ತೇವೆʼ ಎಂದು ಅವರು ವಿವರಿಸಿದರು. ತಂತ್ರಜ್ಞಾನದ ಸುರಕ್ಷತೆಯ ವಿಚಾರವನ್ನು ಬರೀ ಮಾರುಕಟ್ಟೆಯ ಲಾಭ-ನಷ್ಟಕ್ಕೆ ಬಿಡಲು ಸಾಧ್ಯವಿಲ್ಲ, ಅದಕ್ಕೊಂದು ನಿಯಂತ್ರಣ ಇರಬೇಕು ಎಂದೂ ಅವರು ಒತ್ತಿಹೇಳಿದರು.

ಇದನ್ನೂ ಓದಿ:

ಜಾಗತಿಕ ವೇದಿಕೆಯಲ್ಲಿ ಹೆಚ್ಚಿದ ಭಾರತದ ತೂಕ

ಬ್ರಿಕ್ಸ್ ಒಕ್ಕೂಟದ ಪ್ರಭಾವದ ಕುರಿತು ಮಾತನಾಡಿದ ಅವರು, ಇತ್ತೀಚೆಗಷ್ಟೇ ದೆಹಲಿಯಲ್ಲಿ ನಡೆದ ಶೃಂಗಸಭೆಯು ಜಾಗತಿಕ ರಾಜಕಾರಣದ ದಿಕ್ಕನ್ನು ಬದಲಿಸಿದೆ ಎಂದರು. ʼಬ್ರಿಕ್ಸ್‌ನಿಂದ ಏನು ಪ್ರಯೋಜನ ಎಂದು ಕೇಳುವವರಿದ್ದರು, ಆದರೆ ಕಾಲವೇ ಅದಕ್ಕೆ ಉತ್ತರಿಸಿದೆ. ಇಂದು ಜಗತ್ತಿನ ಹಲವು ದೇಶಗಳು ಬ್ರಿಕ್ಸ್ ಸೇರಲು ಸಾಲುಗಟ್ಟಿ ನಿಂತಿವೆ. ನಾವು ಸದಸ್ಯ ರಾಷ್ಟ್ರಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿದ್ದೇವೆ, ಮನಸ್ಸು ಮಾಡಿದ್ದರೆ ಅದನ್ನು ನಾಲ್ಕು ಪಟ್ಟು ಮಾಡಬಹುದಿತ್ತು. ಜಾಗತಿಕ ನಿರ್ಧಾರಗಳಲ್ಲಿ ತಮಗೂ ಒಂದು ಸ್ಥಾನ ಬೇಕು ಎಂದು ಜಗತ್ತು ಬಯಸುತ್ತಿರುವುದಕ್ಕೆ ಇದುವೇ ಸಾಕ್ಷಿ” ಎಂದು ಜೈಶಂಕರ್ ಹೆಮ್ಮೆಯಿಂದ ಹೇಳಿದರು.

Must Read