ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ವಿಶ್ವಕರ್ಮ ಪೂಜೆ ಹಿನ್ನೆಲೆ 16.4 ಲಕ್ಷ ಕಟ್ಟಡ ಕಾರ್ಮಿಕರ ಖಾತೆಗಳಿಗೆ ಸುಮಾರು 802 ಕೋಟಿ ರೂಪಾಯಿಗಳನ್ನು ವರ್ಗಾಯಿಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘೋಷಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ 75ನೇ ಹುಟ್ಟುಹಬ್ಬ ಹಾಗೂ ವಿಶ್ವಕರ್ಮ ಪೂಜೆ ಹಿನ್ನೆಲೆ ಇಂದು ರಾಜ್ಯ ಸರ್ಕಾರ ಮುಖ್ಯಮಂತ್ರಿ ಪ್ರತಿಜ್ಞಾ ಯೋಜನೆ ವೆಬ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.
ಈ ಕುರಿತು ಪೋಸ್ಟ್ ಮಾಡಿರುವ ಅವರು, ಇವತ್ತು ವಿಶ್ವಕರ್ಮ ಪೂಜೆಯನ್ನು ನೆರವೇರಿಸಲಾಗುವುದು. ವಿಶ್ವಕರ್ಮ ಬ್ರಹ್ಮಾಂಡದ ವಾಸ್ತುಶಿಲ್ಪಿಯಾಗಿದ್ದಾರೆ. ಹಾಗೇ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವಾಗಿದೆ. ದೇಶ ಜನರ ಮತ್ತು ನಾಗರಿಕರ ಉನ್ನತಿಗಾಗಿ ಸಂಪೂರ್ಣ ಸಮರ್ಪಣಾಭಾವದಿಂದ ಅಥವಾ ದಣಿವರಿಯದಂತೆ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ.ಈ ಎಲ್ಲಾ ಸಂಭ್ರಮದ ದಿನಗಳ ದಿನವೇ ಬಿಹಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ಕಾರ್ಮಿಕರ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗುತ್ತಿದೆ ಎಂದು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ವಾರ್ಷಿಕ ಜವಳಿ ನೆರವು ಯೋಜನೆಯಡಿ 16.4 ಲಕ್ಷ ಕಟ್ಟಡ ಕಾರ್ಮಿಕರ ಖಾತೆಗಳಿಗೆ ಸುಮಾರು 802.46 ಕೋಟಿ ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗುತ್ತಿದೆ. ಸಮಾಜದ ಕಟ್ಟಕಡೆಯ ಜನರನ್ನು ಮುಖ್ಯವಾಹಿನಿಗೆ ತರಲು ನಾವು ಶ್ರಮಿಸುತ್ತಿದ್ದೇವೆ. ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕಾರ್ಮಿಕ ಸಹೋದರ ಸಹೋದರಿಯರ ಕೊಡುಗೆ ಅಮೂಲ್ಯವಾಗಿದೆ. ಅವರ ಅಭಿವೃದ್ಧಿಗೆ ಸರ್ಕಾರ ನಿರಂತರ ಶ್ರಮಿಸಲಿದೆ ಎಂದರು.
ಉನ್ನತ ಶಿಕ್ಷಣವನ್ನು ಮುಂದುವರಿಸಲು ಬಿಹಾರ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಒದಗಿಸಲಾದ ಶಿಕ್ಷಣ ಸಾಲಗಳು ಈಗ ಎಲ್ಲಾ ಅರ್ಜಿದಾರರಿಗೆ ಬಡ್ಡಿರಹಿತವಾಗಿರುತ್ತದೆ ಎಂದು ಘೋಷಿಸಿದರು.
ಈ ಹಿಂದೆ 60 ಮಾಸಿಕ ಕಂತುಗಳಿಗೆ 5 ವರ್ಷಗಳ ಅವಧಿಗೆ ನಿಗದಿಪಡಿಸಲಾಗಿದ್ದ 2 ಲಕ್ಷದವರೆಗಿನ ಶಿಕ್ಷಣ ಸಾಲಗಳ ಮರುಪಾವತಿ ಅವಧಿಯನ್ನು ಗರಿಷ್ಠ 84 ಮಾಸಿಕ ಕಂತುಗಳಿಗೆ ವಿಸ್ತರಿಸಲಾಗಿದೆ. 2 ಲಕ್ಷಕ್ಕಿಂತ ಹೆಚ್ಚಿನ ಸಾಲದ ಮೊತ್ತಕ್ಕೆ ಮರುಪಾವತಿ ಅವಧಿಯನ್ನು 84 ಮಾಸಿಕ ಕಂತುಗಳಿಂದ (7 ವರ್ಷಗಳು) ಗರಿಷ್ಠ 120 ಮಾಸಿಕ ಕಂತುಗಳಿಗೆ (10 ವರ್ಷಗಳು) ಹೆಚ್ಚಿಸಲಾಗಿದೆ.