ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ವಾಸದ ಮೂಲಕ ನಮ್ಮ ಜೀವನದ ಆಗುಹೋಗುಗಳನ್ನು ಮಾತ್ರವಲ್ಲ, ಜಗತ್ತಿನ ವಿವಿಧ ಸನ್ನಿವೇಶಗಳನ್ನೂ ಅರಿತುಕೊಳ್ಳಲು ಸಾಧ್ಯವಿದೆ. ದೇಹದಲ್ಲಿ ಇರುವುದೇ ಬ್ರಹ್ಮಾಂಡದಲ್ಲಿಯೂ ಇದೆ ಎಂಬ ಭಾರತೀಯ ಚಿಂತನೆಯ ಹಿನ್ನೆಲೆಯಲ್ಲಿ ಉಸಿರಿನ ಗತಿಯನ್ನು ಅರ್ಥಮಾಡಿಕೊಳ್ಳುವುದು ಮಹತ್ವದ್ದಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವತಿಯಿಂದ ಆಯೋಜಿಸಲಾಗಿದ್ದ ಎರಡು ದಿನಗಳ ‘ಸ್ವರೋದಯ’ ರಾಷ್ಟ್ರೀಯ ಜ್ಯೋತಿಷ ವಿಚಾರಮಂಥನದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ನಮ್ಮ ಶರೀರ ಹಾಗೂ ಪ್ರಕೃತಿಯಲ್ಲಿಯೇ ಮುಂದೆ ಸಂಭವಿಸಬಹುದಾದ ಹಲವು ಸನ್ನಿವೇಶಗಳ ಸೂಚನೆಗಳು ಅಡಕವಾಗಿರುತ್ತವೆ. ಇವುಗಳನ್ನು ಶಕುನ ಎಂದು ಕರೆಯಲಾಗುತ್ತದೆ ಮತ್ತು ಇದು ಜ್ಯೋತಿಷದ ಒಂದು ಭಾಗವಾಗಿದೆ. ಇದೇ ರೀತಿ ಶ್ವಾಸದ ಗತಿಗೆ ಸಂಬಂಧಿಸಿದ ಸ್ವರಶಾಸ್ತ್ರವೂ ಜ್ಯೋತಿಷದ ಪ್ರಮುಖ ಅಂಗವಾಗಿದೆ ಎಂದು ವಿವರಿಸಿದರು.

ಉಸಿರಾಟ ಸಾಮಾನ್ಯ ಪ್ರಕ್ರಿಯೆಯಂತೆ ಕಂಡರೂ ಅದರ ಹಿಂದೆ ಸೂಕ್ಷ್ಮವಾದ ಜ್ಞಾನವಿದೆ. ಶ್ವಾಸದ ಗತಿಯನ್ನು ಗಮನಿಸಿ ಅರ್ಥಮಾಡಿಕೊಳ್ಳುವ ಮೂಲಕ ವ್ಯಕ್ತಿಯ ಬದುಕಿನ ಹಲವು ಆಯಾಮಗಳನ್ನು ತಿಳಿದುಕೊಳ್ಳಬಹುದು. ಉಸಿರನ್ನು ಅರಿತುಕೊಳ್ಳುವುದು ಎಂದರೆ ಬದುಕನ್ನೇ ಅರ್ಥಮಾಡಿಕೊಂಡಂತೆ. ಈ ಜ್ಞಾನವನ್ನು ಕೇವಲ ದೈವಜ್ಞರು ಮಾತ್ರವಲ್ಲದೆ ಜನಸಾಮಾನ್ಯರೂ ತಿಳಿದುಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಶ್ರೀಗಳು ಹೇಳಿದರು.

ಜ್ಯೋತಿಷ ಮತ್ತು ಸ್ವರಶಾಸ್ತ್ರದ ನಡುವಿನ ಸಂಬಂಧವನ್ನು ವಿವರಿಸಿದ ಅವರು, ಉಸಿರಾಟದ ಸೂಕ್ಷ್ಮ ಜ್ಞಾನವಿಲ್ಲದೆ ದೈವಜ್ಞನ ಜ್ಞಾನ ಪೂರ್ಣವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು. ಇಂದಿನ ದಿನಗಳಲ್ಲಿ ಶ್ವಾಸವಿದ್ಯೆ ಅಳಿವಿನಂಚಿನಲ್ಲಿದ್ದು, ಅದನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಪ್ರಾಯೋಗಿಕವಾಗಿ ಶ್ವಾಸಾವಲೋಕನ ಮಾಡುವ ಮೂಲಕ ಈ ಪ್ರಾಚೀನ ವಿದ್ಯೆಯ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೊಡುಗೆ ನೀಡಬಹುದು ಎಂದು ಕರೆ ನೀಡಿದರು.
ಭಾರತೀಯ ಪರಂಪರೆಯಲ್ಲಿ ಅಮೂಲ್ಯವಾದ ಅನೇಕ ಜ್ಞಾನಪರಂಪರೆಗಳಿದ್ದರೂ ಅವುಗಳ ಬಗ್ಗೆ ನಿರ್ಲಕ್ಷ್ಯ ಬೆಳೆದಿರುವುದು ವಿಷಾದನೀಯ. ನಮ್ಮ ಜ್ಞಾನಭಂಡಾರದ ಹಲವು ವಿಚಾರಗಳನ್ನು ವಿದೇಶಿಗರು ಅಧ್ಯಯನ ಮಾಡಿದ ಬಳಿಕ, ಅದೇ ಜ್ಞಾನವನ್ನು ಅವರಿಂದಲೇ ಕಲಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ವಿಚಾರಮಂಥನದ ಅಂಗವಾಗಿ ದೇಶದ ಶ್ರೇಷ್ಠ ದೈವಜ್ಞರಲ್ಲೊಬ್ಬರಾದ ಕೇರಳದ ವಿದ್ವಾನ್ ಕೈಮುಕ್ಕು ನಾರಾಯಣ ನಂಬೂದರಿ ಅವರನ್ನು ಶ್ರೀಗಳು ಆಶೀರ್ವದಿಸಿದರು. ಎರಡು ದಿನಗಳ ಕಾಲ ನಡೆದ ರಾಷ್ಟ್ರೀಯ ವಿಚಾರ ಗೋಷ್ಠಿಯಲ್ಲಿ ವಿದ್ವಾನ್ ಗೋಪಾಲಕೃಷ್ಣಶರ್ಮಾ ‘ದೈವಜ್ಞನ ಲಕ್ಷಣ’, ವಿದ್ವಾನ್ ರಾ. ಗಣಪತಿ ಭಟ್ಟರು ‘ಸಮಾಹಿತಮನಾಃ’, ವಿದ್ವಾನ್ ಶಿವಪ್ರಸಾದ್ ತಂತ್ರಿಗಳು ‘ದೈವಜ್ಞನ ದಿನಚರಿ’ ವಿಚಾರದ ಕುರಿತಾಗಿ ವಿಷಯ ಮಂಡಿಸಿದರು.
ವಿದ್ವಾನ್ ಹಂಡ್ರಮನೆ ಗೋಪಾಲಕೃಷ್ಣ ಭಟ್ ಗೋಷ್ಠಿಯ ಅಧ್ಯಕ್ಷತೆಯನ್ನುವಹಿಸಿದ್ದರು. ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ವಾನ್ ನರಸಿಂಹ ಭಟ್ಟ ಬಡಗು, ದೈವಜ್ಞ ಮಿತ್ತೂರು ಕೇಶವ ಭಟ್ಟ, ದೈವಜ್ಞ ಮಧುಸೂಧನ ಶರ್ಮಾ, ಡಾ. ಕೆ.ಸಿ. ನಾಗೇಶ್ ಭಟ್ ಸೇರಿದಂತೆ ನಾಡಿನ ವಿವಿಧ ಭಾಗಗಳ ದೈವಜ್ಞರು ವಿಚಾರಮಂಥನದಲ್ಲಿ ಭಾಗವಹಿಸಿದ್ದರು.




