ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳು ತಿಂಗಳ ಗರ್ಭಿಣಿಯಾಗಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಡೆಂಗ್ಯೂ ಜ್ವರದಿಂದಾಗಿ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ.
ಮಹಿಳಾ ಪೊಲೀಸ್ ಸಿಬ್ಬಂದಿ ರೇಖಾ ವೀರೇಶಕುಮಾರ್ (33) ಮೃತರು. ಹನುಗುಂದ ತಾಲೂಕಿನ ಇದ್ದಲಗಿ ಗ್ರಾಮದ ನಿವಾಸಿಯಾಗಿದ್ದ ರೇಖಾ 2018ನೇ ಬ್ಯಾಚ್ನ ಮಹಿಳಾ ಪೊಲೀಸ್ ಪೇದೆಯಾಗಿರುವ ರೇಖಾ ಅವರು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಆರೋಗ್ಯವಾಗಿದ್ದ ರೇಖಾಗೆ ಡೆಂಗ್ಯೂ ಬಾಧಿಸಿತ್ತು. ತಾಯಿಯಾಗುವ ಸಂಭ್ರಮದಲ್ಲಿದ್ದ ರೇಖಾ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ರೇಖಾ ಮೃತಪಟ್ಟಿದ್ದಾರೆ. ಇನ್ನೆರಡು ತಿಂಗಳಿನಲ್ಲಿ ಮನೆಯಲ್ಲಿ ಕಂದಮ್ಮನ ದನಿ ಕೇಳಿಸುತ್ತದೆ, ಮನೆಯೆಲ್ಲಾ ಸಂತಸದಿಂದ ತುಂಬಿರುತ್ತದೆ ಎಂದುಕೊಂಡಿದ್ದ ಕುಟುಂಬದಲ್ಲಿ ಸೂತಕ ಮೂಡಿದೆ.



