ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದಾರರಪಟ್ಟಿಯ ವಿಶೇಷ ತೀವ್ರ ಪರಿಶೀಲನೆ (ಎಸ್ಐಆರ್)ಗೆ ಸಂಬಂಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಫಾರ್ಮ್ 6ನ್ನು ಕಾನೂನು ಬಾಹಿರವಾಗಿ ಮತ್ತು ಏಕಪಕ್ಷೀಯವಾಗಿ ಬದಲಾಯಿಸಿದ್ದಾರೆ ಎಂಬ ವಿಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಆರೋಪವನ್ನು ಚುನಾವಣಾ ಆಯೋಗ ಸೋಮವಾರ “ಫ್ಯಾಕ್ಟ್ ಚೆಕ್”ಮೂಲಕ ಪರಿಶೀಲಿಸಿ, ರಾಹುಲ್ ಆರೋಪ ಸತ್ಯವಲ್ಲ, ತಪ್ಪು ದಾರಿಗೆಳೆಯುವಂಥದ್ದು ಎಂದು ಹೇಳಿದೆ.
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ(ಎಸ್ಐಆರ್)ಗೆ ಸಂಬಂಸಿ ಚುನಾವಣಾ ಆಯೋಗವು 2025ರ ಜೂ.24ರಂದು ಹೊರಡಿಸಿದ ಆದೇಶವು ಚುನಾವಣಾ ಆಯೋಗದ ಸರ್ವಾನುಮತದ ಅನುಮೋದನೆ ಪಡೆದಿದ್ದು, ಅನಂತರ ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಕೂಡ ತನ್ನ 2026ರ ಮೇ 27ರ ತೀರ್ಪಿನಲ್ಲಿ ಎತ್ತಿಹಿಡಿದಿರುವುದನ್ನು ಬೊಟ್ಟು ಮಾಡಿತು.
ಅಲ್ಲದೆ ಚುನಾವಣಾ ಆಯೋಗವು 2026ರ ಸೆಪ್ಟೆಂಬರ್ 26ರಂದು ನೀಡಿದ ತನ್ನ ಪತ್ರಿಕಾ ಪ್ರಕಟಣೆಯ ಟಿಪ್ಪಣಿ ಪಾಯಿಂಟ್ 1ರಲ್ಲಿ, “ಫಾರ್ಮ್ 6ಗೆ ಲಗತ್ತಿಸಲಾದ ಘೋಷಣೆಯನ್ನು ಗೌರವಾನ್ವಿತ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ” ಎಂದಿರುವುದನ್ನು ಉಲ್ಲೇಖಿಸಿದೆ. ರಾಹುಲ್ ಗಾಂಧಿ ಇತ್ತೀಚಿನ ಸುಪ್ರೀಂಕೋರ್ಟ್ ಅವಲೋಕನವನ್ನು ಉಲ್ಲೇಖಿಸಿ, ಸಿಇಸಿ ಫಾರ್ಮ್ 6ನ್ನು “ಅಕ್ರಮವಾಗಿ ಮತ್ತು ಏಕಪಕ್ಷೀಯವಾಗಿ ಬದಲಾಯಿಸಿದೆ “ಎಂದು ಎಕ್ಸ್ನಲ್ಲಿ ಆರೋಪಿಸಿರುವುದಕ್ಕೆ ಆಯೋಗ ಈ ವಾಸ್ತವಿಕ ಅಂಶಗಳ ಆಧಾರದೊಂದಿಗೆ ಪ್ರತಿಕ್ರಿಯಿಸಿದೆ. ಫಾರ್ಮ್ 6 ಅರ್ಹ ಮತದಾರರು ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ಸೇರಿಸುವುದಕ್ಕೆ ಬಳಸುವ ಅರ್ಜಿಯಾಗಿದೆ.
ಇದನ್ನೂ ಓದಿ:
ಬಿಹಾರ ಎಸ್ಐಆರ್ ಸಂದರ್ಭ ಫಾರ್ಮ್6ಗೆ ಘೋಷಣೆಯೊಂದನ್ನು ಲಗತ್ತಿಸಲಾಗಿತ್ತು. ಇದು ಅರ್ಜಿದಾರರ ಪೋಷಕರ ಬಗ್ಗೆ ಮಾಹಿತಿ ಸೇರಿದಂತೆ ಹೆಚ್ಚುವರಿ ವಿವರಗಳನ್ನು ಕೋರುತ್ತದೆ. ಫಾರ್ಮ್ 6 ಬದಲಾಗದೆ ಉಳಿದಿದೆ.ಆದರೆ ಘೋಷಣೆಯು ಎಸ್ಐಆರ್ ಪ್ರಕ್ರಿಯೆಗಾಗಿ ಅದಕ್ಕೆ ಲಗತ್ತಿಸಲಾದ ಪ್ರತ್ಯೇಕ ದಾಖಲೆಯಾಗಿತ್ತು. ಎಸ್ಐಆರ್ ಹೊರತುಪಡಿಸಿ, 1960ರ ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ ಸೂಚಿಸಲಾದ ಫಾರ್ಮ್ಗಳು ಅನ್ವಯಿಸುತ್ತವೆ ಎಂದು ತಿಳಿಸಿತ್ತಾದರೂ, ಅನಂತರ ಆಯೋಗದ ಆನ್ಲೈನ್ ಪೋರ್ಟಲ್ಗಳಿಂದ ಅದನ್ನು ಹಿಂಪಡೆಯಲಾಗಿತ್ತು.
ಫಾರ್ಮ್ 6ರ ಆನ್ಲೈನ್ ಆವೃತ್ತಿ ಮತ್ತು ಘೋಷಣೆಗಳೆರಡಕ್ಕೂ ಪ್ರತ್ಯೇಕ ಒಟಿಪಿ ಪರಿಶೀಲನೆಯ ಅಗತ್ಯದ ಬದಲು ಒಂದೇ ಒಟಿಪಿ ಬಳಸಿದ್ದರಿಂದ ಘೋಷಣೆಯು ಫಾರ್ಮ್ 6ರ ಭಾಗವೆಂದು ಭಾವಿಸಲು ಕಾರಣವಾಗಿತ್ತು. ಹಾಗೆಯೇ ಸೆ.26ರ ಪತ್ರಿಕಾ ಹೇಳಿಕೆಯನ್ನು ಹಿಂಪಡೆಯಲಾಗಿದೆ ಎಂಬ ಹೇಳಿಕೆಯನ್ನೂ ಚುನಾವಣಾ ಆಯೋಗ ತಿರಸ್ಕರಿಸಿದ್ದು, ಇದು ಲಭ್ಯವಾಗಿಯೇ ಉಳಿದಿದೆ ಎಂಬುದನ್ನು ಆಧಾರದೊಂದಿಗೆ ಪ್ರದರ್ಶಿಸಿದೆ.
ವಿಶ್ವದಲ್ಲೇ ಶ್ಲಾಘನೆಗೆ ಭಾಜನವಾಗಿರುವ ಭಾರತೀಯ ಚುನಾವಣಾ ಆಯೋಗವೀಗ ದೇಶದೊಳಗೆ ವಿಪಕ್ಷಗಳ, ರಾಜಕೀಯ ಪುಡಾರಿಗಳ ಆರೋಪ-ನಿಂದಾಸತ್ರಗಳಿಗೆ ಸಿಲುಕಿರುವುದು ಈಗ ಪ್ರಜ್ಞಾವಂತರಲ್ಲಿ ಕಳವಳ ಮೂಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.



