ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಶೀಲನೆ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಮತ್ತು ಜೆಡಿಎಸ್ ಒಳಗೊಂಡ ಎನ್ಡಿಎ ನಿಯೋಗ, ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದೆ.
ಫಾರ್ಮ್-7 ಮೂಲಕ ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಿದವರ ವಿರುದ್ಧ ಅನಗತ್ಯ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸದಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ನಿಯೋಗ ಆಗ್ರಹಿಸಿದೆ.
ಮನವಿ ಪತ್ರ ಸಲ್ಲಿಸಿದ ಬಿಜೆಪಿ-ಜೆಡಿಎಸ್ ಮುಖಂಡರು
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ-ಜೆಡಿಎಸ್ ಮುಖಂಡರು ಮಂಗಳವಾರ ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.
ಎಸ್ಐಆರ್ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿರುವ ಕೆಲವು ಹೆಸರುಗಳ ಕುರಿತು ಫಾರ್ಮ್-7 ಮೂಲಕ ಆಕ್ಷೇಪಣೆ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಪೊಲೀಸರು ಗುರಿಯಾಗಿಸಿಕೊಂಡಿದ್ದಾರೆ ಎಂದು ನಿಯೋಗ ಆರೋಪಿಸಿದೆ. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಳ್ಳು ಅಥವಾ ನಕಲಿ ಆಕ್ಷೇಪಣೆ ಸಲ್ಲಿಸಿದ ಆರೋಪದಡಿ ಪ್ರಕರಣಗಳು ದಾಖಲಾಗುತ್ತಿವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅಥವಾ ಅಳಿಸುವಿಕೆ ಕುರಿತು ಆಕ್ಷೇಪಣೆ ಸಲ್ಲಿಸಲು ಫಾರ್ಮ್-7 ಕಾನೂನುಬದ್ಧ ಅವಕಾಶವಾಗಿದೆ ಎಂದು ನಿಯೋಗ ಪ್ರತಿಪಾದಿಸಿದೆ. ಆಕ್ಷೇಪಣೆ ಬಂದ ಬಳಿಕ ಚುನಾವಣಾ ನೋಂದಣಿ ಅಧಿಕಾರಿ ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ವಿಚಾರಣೆ ನಡೆಸಿ, ಆಕ್ಷೇಪಣೆ ಸಲ್ಲಿಸಿದವರು ಹಾಗೂ ಸಂಬಂಧಪಟ್ಟ ಮತದಾರರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕಾಗುತ್ತದೆ ಎಂದು ತಿಳಿಸಿದೆ. ಅಧಿಕಾರಿಗಳ ನಿರ್ಧಾರಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ವ್ಯವಸ್ಥೆಯೂ ಇದೆ ಎಂದು ನಿಯೋಗ ಉಲ್ಲೇಖಿಸಿದೆ.
ಗಂಭೀರ ಸ್ವರೂಪದ ಸೆಕ್ಷನ್ಗಳ ಬಳಕೆ
ಬೀದರ್ನ ಭಾಲ್ಕಿ, ಬೆಳಗಾವಿಯ ಮಾರ್ಕೆಟ್ ಏರಿಯಾ, ಬೆಂಗಳೂರಿನ ವ್ಯಾಲಿಕಾವಲ್, ಬಳ್ಳಾರಿ ಹಾಗೂ ಮೈಸೂರಿನ ನರಸಿಂಹರಾಜ ಪೊಲೀಸ್ ಠಾಣೆಗಳಲ್ಲಿ ಫಾರ್ಮ್-7ಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ ಎಂದು ಎನ್ಡಿಎ ಆರೋಪಿಸಿದೆ. ಸುಳ್ಳು ಆಕ್ಷೇಪಣೆ ಸಲ್ಲಿಸುವುದು ಕಾನೂನಿನಡಿ ಶಿಕ್ಷಾರ್ಹವಾಗಿದ್ದರೂ, ಪೊಲೀಸರು ಗಂಭೀರ ಸ್ವರೂಪದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ಗಳನ್ನು ಬಳಸುತ್ತಿದ್ದಾರೆ ಎಂದು ನಿಯೋಗ ಆಕ್ಷೇಪಿಸಿದೆ.
ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎಂಬ ಒತ್ತಾಯದ ನಡುವೆ ಎಸ್ಐಆರ್ ವಿಚಾರ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿದೆ. ಇದೀಗ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಎನ್ಡಿಎ ಮನವಿ ಮಾಡಿರುವುದರಿಂದ ಈ ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.



