ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಬಾಕ್ಸ್ ಆಫೀಸ್ ದಾಖಲೆಗಳನ್ನೂ ಮೀರಿಸುವ ಮಟ್ಟದಲ್ಲಿ ವಿಡಿಯೋ ಗೇಮ್‌ವೊಂದು ಅಬ್ಬರಿಸಿದೆ. ಬಹುನಿರೀಕ್ಷಿತ GTA 6 ಬಿಡುಗಡೆಯಾದ ಮೊದಲ 24 ಗಂಟೆಗಳಲ್ಲೇ ಬರೋಬ್ಬರಿ 35 ಸಾವಿರ ಕೋಟಿ ರೂ.ಗೂ ಅಧಿಕ ಮೌಲ್ಯದ ಮಾರಾಟ ದಾಖಲಿಸಿದೆ ಎನ್ನಲಾಗಿದ್ದು, ಗೇಮಿಂಗ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ರಾಕ್‌ಸ್ಟಾರ್ ಗೇಮ್ಸ್‌ನ ಈ ಹೊಸ ಆಟದ ಆರಂಭಿಕ ಮಾರಾಟದ ಅಂಕಿಅಂಶಗಳು ಮನರಂಜನಾ ಉದ್ಯಮದ ಗಮನ ಸೆಳೆದಿದ್ದು, ಗೇಮ್ ಮಾರುಕಟ್ಟೆಯ ವಾಣಿಜ್ಯ ಸಾಮರ್ಥ್ಯಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿವೆ.
ಮೊದಲ ದಿನವೇ 35 ಸಾವಿರ ಕೋಟಿ ರೂ. ವಹಿವಾಟು
GTA 6 ಬಿಡುಗಡೆಯಾದ ಮೊದಲ ದಿನವೇ ವಿಶ್ವಾದ್ಯಂತ ಸುಮಾರು 3.79 ಬಿಲಿಯನ್ ಡಾಲರ್ (ಅಂದಾಜು 35,126 ಕೋಟಿ ರೂ.) ಮೌಲ್ಯದ ಚಿಲ್ಲರೆ ಮಾರಾಟ ದಾಖಲಿಸಿದೆ ಎಂದು ಅದರ ಮಾತೃ ಸಂಸ್ಥೆ ಟೇಕ್-ಟು ಇಂಟರಾಕ್ಟಿವ್ ತಿಳಿಸಿದೆ. ನವೆಂಬರ್ 19, 2026ರ ಬಿಡುಗಡೆಯ ದಿನದ ಮಾರಾಟದ ಆಧಾರದ ಮೇಲೆ ಈ ಅಂದಾಜು ಮಾಡಲಾಗಿದೆ. ಬಿಡುಗಡೆಗೂ ಮುನ್ನವೇ 32.5 ಮಿಲಿಯನ್ ಪ್ರತಿಗಳು ಮಾರಾಟವಾಗಿದ್ದು, ಗೇಮ್ ಉದ್ಯಮದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಇದನ್ನೂ ಓದಿ:
ಹಾಲಿವುಡ್ ಸಿನಿಮಾಗಳಿಗೂ ಸವಾಲು!
GTA 6 ಆರಂಭಿಕ ಮಾರಾಟದ ಅಂಕಿಅಂಶಗಳು ಹಾಲಿವುಡ್‌ನ ಜನಪ್ರಿಯ ಸಿನಿಮಾಗಳ ಗಳಿಕೆಯೊಂದಿಗೆ ಹೋಲಿಕೆಗೆ ಕಾರಣವಾಗಿವೆ. ‘ಅವೆಂಜರ್ಸ್: ಎಂಡ್‌ಗೇಮ್’ ಸಿನಿಮಾ ವಿಶ್ವಾದ್ಯಂತ ಸುಮಾರು 2.94 ಬಿಲಿಯನ್ ಡಾಲರ್ ಗಳಿಸಿದ್ದರೆ, GTA 6 ಮೊದಲ ದಿನದ ಮಾರಾಟದ ಅಂದಾಜು ಅದಕ್ಕಿಂತ ಹೆಚ್ಚಾಗಿದೆ.
ವೈಸ್ ಸಿಟಿಗೆ ಮರಳಿದ ಆಟಗಾರರು
GTA 6 ಆಟವು ಫ್ಲೋರಿಡಾ ಪ್ರೇರಿತ ಕಾಲ್ಪನಿಕ ರಾಜ್ಯ ಲಿಯೋನಿಡಾದಲ್ಲಿ ನಡೆಯುತ್ತದೆ. ವೈಸ್ ಸಿಟಿ ಹಿನ್ನೆಲೆಯ ಕಥೆಯಲ್ಲಿ ಜೇಸನ್ ಡುವಾಲ್ ಮತ್ತು ಲೂಸಿಯಾ ಕ್ಯಾಮಿನೋಸ್ ಪ್ರಮುಖ ಪಾತ್ರಗಳಾಗಿದ್ದಾರೆ. ಈ ಆಟ ಪ್ಲೇಸ್ಟೇಷನ್ 5 ಮತ್ತು Xbox Series X|S ನಲ್ಲಿ ಲಭ್ಯವಿದೆ.
13 ವರ್ಷಗಳ ಬಳಿಕ ಹೊಸ ಮುಖ್ಯ GTA ಸರಣಿ ಬಿಡುಗಡೆಯಾಗಿರುವುದು ಅಭಿಮಾನಿಗಳಲ್ಲಿ ಭಾರಿ ಉತ್ಸಾಹ ಮೂಡಿಸಿದೆ. ಮೊದಲ ದಿನದ ಈ ಸಾಧನೆ ಗೇಮಿಂಗ್ ಉದ್ಯಮದ ಆರ್ಥಿಕ ಶಕ್ತಿಯನ್ನು ಮತ್ತೊಮ್ಮೆ ಜಗತ್ತಿಗೆ ತೋರಿಸಿದ್ದು, ಭವಿಷ್ಯದ ಗೇಮ್ ಬಿಡುಗಡೆಗಳಿಗೆ ಹೊಸ ಮಾನದಂಡ ರೂಪಿಸಿದೆ.



