October 7, 2026
Wednesday, October 7, 2026
spot_img

ಕಿವೀಸ್ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಏಷ್ಯನ್ ಗೇಮ್ಸ್‌ನ ಐವರು ಸ್ಟಾರ್‌ಗಳಿಗೆ ಕೊಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನ್ಯೂಝಿಲೆಂಡ್ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ 5 ಪಂದ್ಯಗಳ ಟಿ20 ಸರಣಿಗೆ 16 ಸದಸ್ಯರ ಬಲಶಾಲಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಆದರೆ, ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್ ಟಿ20 ಟೂರ್ನಿಯಲ್ಲಿ ಭಾಗವಹಿಸಿದ್ದ ಐವರು ಪ್ರಮುಖ ಆಟಗಾರರು ಈ ಸರಣಿಯಿಂದ ಹೊರಬಿದ್ದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ವಿಶ್ವದ ನಂಬರ್ ಒನ್ ವೇಗಿ ಜಸ್‌ಪ್ರೀತ್ ಬುಮ್ರಾ ಅವರಿಗೆ ವೆಸ್ಟ್ ಇಂಡೀಸ್ ಹಾಗೂ ನ್ಯೂಝಿಲೆಂಡ್ ವಿರುದ್ಧದ ಸರಣಿಗಳಿಂದ ವಿಶ್ರಾಂತಿ ನೀಡಲಾಗಿದೆ. ಕಾರ್ಯದೊತ್ತಡ ನಿರ್ವಹಣೆಯ ಭಾಗವಾಗಿ ಬುಮ್ರಾ ಅವರಿಗೆ ಈ ಬಿಡುವು ನೀಡಲಾಗಿದೆ. ಇನ್ನು ಏಷ್ಯನ್ ಗೇಮ್ಸ್ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಮಾರಕ ಬೌಲಿಂಗ್ ದಾಳಿ ನಡೆಸಿ ಮಿಂಚಿದ್ದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೂ ಸಹ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಬೌಲಿಂಗ್ ವಿಭಾಗದಲ್ಲಿದ್ದ ಯುವ ವೇಗಿ ಯಶ್ ಠಾಕೂರ್ ಅವರನ್ನು ಈ ಬಾರಿ ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನದಲ್ಲಿ ಹೊಸ ಭರವಸೆಯಾಗಿ ಪ್ರಿನ್ಸ್ ಯಾದವ್ ಅವರಿಗೆ ಭಾರತ ತಂಡದ ಬಾಗಿಲು ತೆರೆದಿದೆ. ಇನ್ನೊಂದೆಡೆ, ವರುಣ್ ಚಕ್ರವರ್ತಿ ಗಾಯಗೊಂಡಾಗ ಚೊಚ್ಚಲ ಅವಕಾಶ ಪಡೆದುಕೊಂಡಿದ್ದ ಯುವ ಮಿಸ್ಟರಿ ಸ್ಪಿನ್ನರ್ ವಿಪ್ರಾಜ್ ನಿಗಮ್ ಅವರಿಗೂ ಈ ಬಾರಿ ಸರಣಿಯಲ್ಲಿ ಜಾಗ ಸಿಕ್ಕಿಲ್ಲ.

ಏಷ್ಯನ್ ಗೇಮ್ಸ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಲ್ಲಿ ಸ್ಥಾನ ಪಡೆದಿದ್ದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರನ್ನು ನ್ಯೂಝಿಲೆಂಡ್ ಸರಣಿಯಿಂದ ಕೈಬಿಡಲಾಗಿದೆ. ಸ್ಪಿನ್ ವಿಭಾಗದಲ್ಲಿ ಬದಲಾವಣೆ ಮಾಡುವ ಬದಲು, ಭಾರತ ತಂಡವು ಬೌಲಿಂಗ್‌ ಬಲ ಹೆಚ್ಚಿಸಲು ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಂಡಿದೆ.

ಒಟ್ಟಾರೆಯಾಗಿ, ಅನುಭವಿ ಹಾಗೂ ಯುವ ಆಟಗಾರರ ಸಮ್ಮಿಶ್ರಣದೊಂದಿಗೆ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ ತೊಡೆತಟ್ಟಲು ಸಂಪೂರ್ಣವಾಗಿ ಸಜ್ಜಾಗಿದೆ.

Must Read