ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದರಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವೇಳೆ ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್ಐಆರ್ ಜಿಬಿಎ ವ್ಯಾಪ್ತಿಯಲ್ಲಿ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಹೆಚ್ಚುವರಿಯಾಗಿ 1,117 ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗಾಗಿ ಜಿಬಿಎ ವ್ಯಾಪ್ತಿಯಲ್ಲಿ 814 ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 1,117 ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳ ನೇಮಕದೊಂದಿಗೆ ಇದೀಗ ಕಾರ್ಯನಿರ್ವಹಿಸುತ್ತಿರುವ ಒಟ್ಟು ಅಧಿಕಾರಿಗಳ ಸಂಖ್ಯೆ 1,193ಕ್ಕೆ ಏರಿಕೆಯಾಗಿದೆ.
ಸಾರ್ವಜನಿಕರಿಗೆ ಅನುಕೂಲವಾಗುವಂತೆ ವಿಚಾರಣೆ ಪ್ರಕ್ರಿಯೆಗಾಗಿ ಚುನಾವಣಾ ಆಯೋಗವು ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ರೂಪಿಸಿದೆ. ಎಸ್ಐಆರ್ ಪ್ರಕ್ರಿಯೆಯಲ್ಲಿ ಮ್ಯಾಪ್ ಮಾಡಲಾಗಿಲ್ಲ ಅಥವಾ ತಾರ್ಕಿಕ ವ್ಯತ್ಯಾಸ ಎಂದು ಉಲ್ಲೇಖಿಸಿ ನೋಟಿಸ್ ನೀಡಿದ್ದರೆ, ಅಥವಾ ನಮೂನೆ-6 ಮತ್ತು ನಮೂನೆ-7ಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಅಗತ್ಯವಿದ್ದರೆ, ಮತದಾರರ ನೋಂದಣಿ ಅಧಿಕಾರಿಗಳು ಅಥವಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಮನೆಗೆ ತೆರಳಿ ಅಗತ್ಯ ದಾಖಲೆಗಳನ್ನು ಪಡೆದು, ಪರಿಶೀಲನೆ ನಡೆಸಿ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಲಿದ್ದಾರೆ.
ಹೀಗಾಗಿ ಎಲ್ಲರೂ ಖುದ್ದು ಹಾಜರಾಗಬೇಕು ಎಂದಿಲ್ಲ. ವಿಶೇಷ ಸಂದರ್ಭಗಳಲ್ಲಿ ಮತದಾರರ ನೋಂದಣಿ ಅಧಿಕಾರಿಗಳು ಆನ್ಲೈನ್ನಲ್ಲಿಯೇ ಪ್ರಕ್ರಿಯೆ ನಡೆಸುತ್ತಾರೆ ಎಂದು ಎಸ್ಐಆರ್ಗೆ ಸಂಬಂಧಿಸಿದ ಹಕ್ಕುಗಳು ಮತ್ತು ಆಕ್ಷೇಪಣೆಗಳ ಕುರಿತು ವಿಶೇಷ ಆಯುಕ್ತೆ (ಚುನಾವಣೆ) ಶಿಲ್ಪಾ ನಾಗ್ ಮಾಹಿತಿ ನೀಡಿದ್ದಾರೆ.



