ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ‘ದಿ ಕಪಿಲ್ ಶರ್ಮಾ ಶೋ’ಗೆ ಆಗಮಿಸಿದ್ದ ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ, “ಇಂದಿನ ಕಾಲದಲ್ಲಿ ಅಶ್ಲೀಲ ಮಾತುಗಳಿಲ್ಲದೆ ಕಾಮಿಡಿ ಮಾಡುವ ಏಕೈಕ ಕಾಮಿಡಿಯನ್ ಅಂದರೆ ಕಪಿಲ್ ಶರ್ಮಾ ಮಾತ್ರ” ಎಂದು ಹೊಗಳಿ ಅಚ್ಚರಿ ಮೂಡಿಸಿದ್ದರು. ಮೇಲ್ನೋಟಕ್ಕೆ ಇದು ಸಾಮಾನ್ಯ ಪ್ರಶಂಸೆಯಂತೆ ಕಂಡರೂ, ಇದರ ಹಿಂದೆ ದೊಡ್ಡದೊಂದು ಬಾಲಿವುಡ್ ಇನ್ಸೈಡ್ ಕಥೆಯಿದೆ ಎಂಬ ಚರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸುದ್ದಿಗಳ ಪ್ರಕಾರ, ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಹೊಸ ಸಿನಿಮಾದ ಪ್ರಮೋಷನ್ಗಾಗಿ ಮೊದಲು ಸಂಪರ್ಕಿಸಿದ್ದು ಕಪಿಲ್ ಅವರನ್ನಲ್ಲ, ಬದಲಿಗೆ ಯೂಟ್ಯೂಬ್ ಮತ್ತು ಒಟಿಟಿ ಜಗತ್ತಿನಲ್ಲಿ ಧೂಳೆಬ್ಬಿಸುತ್ತಿರುವ ಸಮಯ್ ರೈನಾ ಅವರನ್ನು. ಸಿದ್ಧಾರ್ಥ್ ತಮ್ಮ ಚಿತ್ರದ ಪ್ರಚಾರಕ್ಕಾಗಿ ಸಮಯ್ ಅವರ ಶೋನಲ್ಲಿ ಭಾಗವಹಿಸಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಸಮಯ್ ತಮ್ಮ ಶೋನ ಫಿನಾಲೆ ಸಂಚಿಕೆಗೆ ಈಗಾಗಲೇ ನಟ ಆಯುಷ್ಮಾನ್ ಖುರಾನಾ ಅವರ ಶೂಟಿಂಗ್ ನಿಗದಿಪಡಿಸಿದ್ದರಿಂದ, ಸಿದ್ಧಾರ್ಥ್ ಅವರ ಕೋರಿಕೆಯನ್ನು ನಿರಾಕರಿಸಿದ್ದರು. ಇದರಿಂದ ಅಸಮಾಧಾನಗೊಂಡ ಸಿದ್ಧಾರ್ಥ್, ಸಮಯ್ ಮೇಲೆ ತೀವ್ರ ಬೇಸರ ಪಟ್ಟಿದ್ದರು ಎನ್ನಲಾಗಿದೆ.
ಸಮಯ್ ಶೋನಲ್ಲಿ ಅವಕಾಶ ಸಿಗದೇ ಇದ್ದಾಗ, ಸಿದ್ಧಾರ್ಥ್ ನೇರವಾಗಿ ಕಪಿಲ್ ಶರ್ಮಾ ಶೋ ಕಡೆಗೆ ಹೆಜ್ಜೆ ಹಾಕಿದರು. ಅಲ್ಲಿ ಸಮಯ್ ಅವರ ಬೋಲ್ಡ್ ಮತ್ತು ವಲ್ಗರ್ ಕಾಮಿಡಿ ಶೈಲಿಗೆ ಪರೋಕ್ಷವಾಗಿ ಟಾಂಗ್ ನೀಡಲು, ಕಪಿಲ್ ಅವರನ್ನು ಪದೇ ಪದೇ “ಅತ್ಯುತ್ತಮ ಕಾಮಿಡಿಯನ್” ಎಂದು ಹೊಗಳುವ ನೆಪದಲ್ಲಿ ತಮ್ಮ ಮನಸ್ಸಿನ ಸಿಟ್ಟನ್ನು ತೀರಿಸಿಕೊಂಡರು ಎಂಬುದು ನೆಟ್ಟಿಗರ ವಾದ.
ಇನ್ನೊಂದೆಡೆ, ನೆಟ್ಫ್ಲಿಕ್ಸ್ ಜಗತ್ತಿನಲ್ಲಿ ಕಪಿಲ್ ಶರ್ಮಾ ಅವರ ಶೋಗಿಂತಲೂ ಸಮಯ್ ರೈನಾ ಅವರ ಶೋ ಹತ್ತು ಪಟ್ಟು ಹೆಚ್ಚು ವೀಕ್ಷಣೆ ಪಡೆದು ಟ್ರೆಂಡಿಂಗ್ನಲ್ಲಿದೆ. ಯುವಜನತೆಯಲ್ಲಿ ಸಮಯ್ ಕ್ರೇಜ್ ನೋಡಿ ಕಪಿಲ್ ಶರ್ಮಾಗೂ ಆತಂಕ ಹಾಗೂ ಅಸೂಯೆ ಶುರುವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಸಮಯದಲ್ಲಿ ಸಿದ್ಧಾರ್ಥ್ ನೀಡಿದ ಈ ಹೇಳಿಕೆ, ಕಪಿಲ್ ಶೋಗೆ ಬೆಂಬಲ ನೀಡಿದಂತೆ ಕಂಡರೂ, ಒಟ್ಟಾರೆಯಾಗಿ ಇದು ಬಾಲಿವುಡ್ ಅಂಗಳದಲ್ಲಿ ಹೊಸ ವಿವಾದಕ್ಕಂತೂ ನಾಂದಿ ಹಾಡಿದೆ. ಈ ಕೋಲ್ಡ್ ವಾರ್ ಮುಂದೆ ಎಲ್ಲಿಗೆ ಹೋಗಿ ತಲುಪಲಿದೆಯೋ ಕಾದು ನೋಡಬೇಕಿದೆ.



