ಹೊಸದಿಗಂತ ವರದಿ ಬಳ್ಳಾರಿ:
ಪ್ರಸಕ್ತ ವರ್ಷ ರಾಜ್ಯದಲ್ಲಿ ಭೀಕರ ಬರ ಆರಿವಸಿದ್ದು, ಅನ್ನದಾತರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ, ನಮ್ಮ ಸರ್ಕಾರ ರೈತರ ಪರವಾಗಿದೆ. ಈಗಾಗಲೇ ಪ್ರತೀ ರೈತರಿಗೆ 2500 ಸಾವಿರ ಪರಿಹಾರ ನೀಡಿದ್ದೇವೆ, ಬರುವ ದಿನಗಳಲ್ಲಿ ರೈತರ ಸoಕಷ್ಟಕ್ಕೆ ಸ್ಪಂದಿಸಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು.
ತಾಲೂಕಿನ ಹಲಕುoದಿ, ಬಿ. ಬೆಳಗಲ್ ಹಾಗೂ ವಂಡ್ರಿ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಅವಲೋಕಿಸಿ ಬುಧವಾರ ಮಾತನಾಡಿದರು. 240 ತಾಲೂಕುಗಳ ಪೈಕಿ 217 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿದ್ದೇವೆ, ಹೆಚ್ಚು ಬರ ಈ ಭಾಗದಲ್ಲಿ ಆವರಿಸಿದೆ, ಹಳ್ಳಿಗಳಲ್ಲಿ ನೀರಿಲ್ಲ, ಮೇವಿನ ಕೊರತೆ ಎದುರಾಗಿದೆ, ಪ್ರತಿ ತಾಲೂಕಿಗೆ ಬರ ನಿರ್ವಹಣೆಗೆ 306 ಕೋಟಿ ನೀಡಿದ್ದೇವೆ ಎಂದರು.
ಕೇಂದ್ರ ಸರ್ಕಾರಕ್ಕೆ ಈಗಾಗಲೇ ಎರಡು ಬಾರಿ ಮನವಿ ಮಾಡಿದ್ದೇವೆ, ನಾವು 46 ಸಾವಿರ ಕೋಟಿ ನಷ್ಟವಾಗಿದೆ ಎಂದು ಹೇಳಿದ್ದು, ಇದರಲ್ಲಿ 12 ಕೋಟಿ ನೀಡುವ ಭರವಸೆಯಿದೆ. ಕೇಂದ್ರದ ತಂಡ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದೆ, ಮೊದಲು ನಾವು ಅವರಿಗೆ ಬರ ಕುರಿತು ಚರ್ಚೆ ಮಾಡಿದ್ದೇವೆ. ನಾವು ಕೇಳಿದಷ್ಟು ಕೇಂದ್ರ ಪರಿಹಾರ ನೀಡೋಲ್ಲ, ರೈತರ ಎಲ್ಲ ಸಂಕಷ್ಟಗಳಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ ಎಂದರು. ರೈತರು ಪಡೆದ ಸಾಲಗಳ ಮರುಪಾವತಿಗೆ ಒತ್ತಾಯಿಸುವುದು, ನೋಟಿಸ್ ನೀಡುವುದು ಬೇಡ, ಕಿರುಕುಳ ಕಂಡು ಬಂದ್ರೆ ಕ್ರಮ ಎಂದು ಈಗಾಗಲೇ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದೆ. ರೈತರನ್ನು ಉಳಿಸುವ ಕೆಲಸ ನಾವು ಪ್ರಾಮಾಣಿಕವಾಗಿ ಮಾಡ್ತೇವೆ, ಇದರಲ್ಲಿ ಅನುಮಾನಬೇಡ ಎಂದರು.
ವಿಮೆ ಮಾಡಿಸಿದ್ದೀವಿ ಒಂದು ರೂಪಾಯಿಯೂ ಪರಿಹಾರ ಸಿಕ್ಕಿಲ್ಲ
ಈ ವರ್ಷ ಹಾಗೂ ಕಳೆದ ವರ್ಷವೂ ವಿಮೆ ಮಾಡಿಸಿದ್ದು, ಇಲ್ಲಿವರೆಗೂ ರೈತರಿಗೆ ಒಂದು ರೂ. ಪರಿಹಾರ ನೀಡಿಲ್ಲ, ಅಧಿಕಾರಿಗಳನ್ನು ಪ್ರಶ್ನಿಸಿದರೆ ಉತ್ತರವಿಲ್ಲ, ಪ್ರಸಕ್ತ ವರ್ಷ ಬಿತ್ತಿದ ಬೆಳೆಗಳು ಸಂಪೂರ್ಣ ನಾಶವಾಗಿವೆ. ರೈತರಿಗೆ ಆತ್ಮಹತ್ಯೆ ಒಂದೇ ಮಾರ್ಗವಾಗಿದೆ, ಇದಕ್ಕೆ ಕೆಟ್ಟ ಹೆಸರು ನಿಮ್ಮ ಸರ್ಕಾರಕ್ಕೆ ಬರಲಿದೆ ಎಂದು ರೈತರು ಅಂಗಲಾಚಿಸಿದರು. ಈ ವೇಳೆ ಡಿಸಿಎಂ ಡಾ. ಪರಮೇಶ್ವರ್ ಅವರು ಮಾತನಾಡಿ, ಇದಕ್ಕೆ ಅವಕಾಶ ನೀಡೋಲ್ಲ, ನಮ್ಮ ಸರ್ಕಾರ ರೈತರ ಪರವಾಗಿದೆ, ಧೈರ್ಯದಿಂದ ಇರಿ ನಿಮ್ಮಜೊತೆಗೆ ನಾವಿದ್ದೇವೆ, ನಮ್ಮ ಸರ್ಕಾರವಿದೆ ಎಂದು ಅಭಯ ನೀಡಿದರು. 2500 ಸಾವಿರ ಪರಿಹಾರ ಕೊಟ್ರೆ ಯಾವದಕ್ಕೂ ಸಾಲದು, ಎಕರೆಗೆ 50 ಸಾವಿರ ಪರಿಹಾರ ನೀಡಿ ಎಂದು ರೈತರು ಮನವಿ ಮಾಡಿದರು.



