October 8, 2026
Thursday, October 8, 2026

ಭಾರತೀಯ ಚಿತ್ರರಂಗಕ್ಕೆ ಬೆಳ್ಳಂಬೆಳಗ್ಗೆ ಶಾಕ್: ನಟನಾ ದಿಗ್ಗಜ ನಾನಾ ಪಾಟೇಕರ್ ಹೃದಯಾಘಾತಕ್ಕೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮ್ಮ ವಿಭಿನ್ನ ನಟನಾ ಶೈಲಿ, ಗಂಭೀರ ಧ್ವನಿ ಮತ್ತು ಪಾತ್ರಗಳಿಗೆ ಜೀವ ತುಂಬುವ ಅಭಿನಯದಿಂದ ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ನಟ ಹಾಗೂ ನಿರ್ದೇಶಕ ನಾನಾ ಪಾಟೇಕರ್ ನಿಧನರಾಗಿದ್ದಾರೆ. 75 ವರ್ಷದ ಪಾಟೇಕರ್ ಗೋವಾದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯ ಸ್ತಂಭನ ಉಂಟಾಗಿ ಕೊನೆಯುಸಿರೆಳೆದಿದ್ದಾರೆ.

ವರದಿಗಳ ಪ್ರಕಾರ, ಗೋವಾದ ನಿವಾಸದಲ್ಲಿ ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ಸೇರಿದಂತೆ ತುರ್ತು ಚಿಕಿತ್ಸಾ ಪ್ರಯತ್ನ ನಡೆಸಿದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ. ಬೆಳಗ್ಗೆ 5.20ಕ್ಕೆ ಅವರು ಮೃತಪಟ್ಟಿರುವುದನ್ನು ವೈದ್ಯರು ಘೋಷಿಸಿದ್ದಾರೆ.

ನಾನಾ ಪಾಟೇಕರ್ ಅವರ ಪುತ್ರ ಮಲ್ಹಾರ್ ಪಾಟೇಕರ್ ಈ ಸಂದರ್ಭದಲ್ಲಿ ಪುಣೆಯಲ್ಲಿದ್ದು, ತಂದೆಯ ನಿಧನದ ಸುದ್ದಿ ತಿಳಿದ ಬಳಿಕ ಗೋವಾಗೆ ತೆರಳಿದ್ದಾರೆ.

‘ಗಮನ್’ನಿಂದ ‘ನಟಸಮ್ರಾಟ್’ವರೆಗೆ ಮರೆಯಲಾಗದ ಪಯಣ

1951ರ ಜನವರಿ 1ರಂದು ಮಹಾರಾಷ್ಟ್ರದಲ್ಲಿ ಜನಿಸಿದ ನಾನಾ ಪಾಟೇಕರ್ 1978ರಲ್ಲಿ ‘ಗಮನ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿನಯದ ಛಾಪು ಮೂಡಿಸಿದರು. ‘ಪರಿಂಡಾ’, ‘ಕ್ರಾಂತಿವೀರ್’, ‘ಅಬ್ ತಕ್ ಛಪ್ಪನ್’, ‘ಅಪಹರಣ’, ‘ವಜೂದ್’ ಹಾಗೂ ‘ಯಶವಂತ್’ ಸೇರಿದಂತೆ ಹಲವು ಚಿತ್ರಗಳಲ್ಲಿನ ಅವರ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಿತು.

ಗಂಭೀರ ಪಾತ್ರಗಳ ಜತೆಗೆ ‘ವೆಲ್ಕಮ್’ ಚಿತ್ರದಲ್ಲಿನ ಉದಯ್ ಶೆಟ್ಟಿ ಪಾತ್ರದ ಮೂಲಕ ಹಾಸ್ಯಪಾತ್ರದಲ್ಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದರು. ‘ವೆಲ್ಕಮ್ ಬ್ಯಾಕ್’, ‘ರಾಜನೀತಿ’, ‘ಹೌಸ್‌ಫುಲ್ 5’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು.

ರಾಷ್ಟ್ರೀಯ ಪ್ರಶಸ್ತಿಯಿಂದ ಪದ್ಮಶ್ರೀವರೆಗೆ

ಅಭಿನಯ ಕ್ಷೇತ್ರದ ಕೊಡುಗೆಗಾಗಿ ನಾನಾ ಪಾಟೇಕರ್ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು. ‘ನಟಸಮ್ರಾಟ್’ ಚಿತ್ರದ ಅಭಿನಯಕ್ಕಾಗಿ 2016ರಲ್ಲಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯೂ ಲಭಿಸಿತ್ತು. 2013ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಭಿನಯದ ಜತೆಗೆ ಹಿನ್ನೆಲೆ ಗಾಯಕರಾಗಿಯೂ ಅವರು ಗುರುತಿಸಿಕೊಂಡಿದ್ದರು.

ಸಾಮಾಜಿಕ ಕಾರ್ಯಗಳಲ್ಲಿಯೂ ಭಾಗಿ

ಚಿತ್ರರಂಗದ ಹೊರತಾಗಿಯೂ ರೈತರು ಹಾಗೂ ಕೃಷಿ ಸಂಕಷ್ಟದಿಂದ ಬಳಲುತ್ತಿದ್ದ ಕುಟುಂಬಗಳಿಗೆ ನೆರವಾಗುವ ಸಾಮಾಜಿಕ ಕಾರ್ಯಗಳೊಂದಿಗೆ ಅವರು ಗುರುತಿಸಿಕೊಂಡಿದ್ದರು.

Must Read