November 23, 2026
Monday, November 23, 2026
spot_img

ನೇಪಾಳದಲ್ಲಿ ತಲೆ ಎತ್ತಲಿದೆ ಭಾರತದ ಪ್ರತಿಷ್ಠಿತ ಐಐಟಿ ಕ್ಯಾಂಪಸ್, ಸ್ಟಾರ್ಟ್‌ಅಪ್ ಇನ್‌ಕ್ಯುಬೇಟರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಮತ್ತು ನೇಪಾಳ ನಡುವಿನ ಶೈಕ್ಷಣಿಕ, ತಾಂತ್ರಿಕ ಹಾಗೂ ಯುವಜನತೆಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ, ನೇಪಾಳದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT) ಕ್ಯಾಂಪಸ್, ಸ್ಟಾರ್ಟ್‌ಅಪ್ ಇನ್‌ಕ್ಯುಬೇಟರ್ ಹಾಗೂ ಇನ್ನೋವೇಶನ್ ಹಬ್ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಘೋಷಿಸಿದ್ದಾರೆ.

ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಬಾಲೇಂದ್ರ ‘ಬಾಲೆನ್’ ಶಾ ಅವರೊಂದಿಗೆ ಹೈದರಾಬಾದ್ ಹೌಸ್‌ನಲ್ಲಿ ನಡೆದ ನಿಯೋಗ ಮಟ್ಟದ ಮಾತುಕತೆಯ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಈ ಮಹತ್ವದ ಘೋಷಣೆಗಳನ್ನು ಮಾಡಿದರು.

ನೇಪಾಳದ ಯುವಜನತೆಗೆ ಭಾರತದ ಕೊಡುಗೆಗಳೇನು?

“ನೇಪಾಳದ ಯುವ ಪೀಳಿಗೆ ಪ್ರತಿಭೆ, ಉತ್ಸಾಹ ಮತ್ತು ದೊಡ್ಡ ಕನಸುಗಳನ್ನು ಹೊಂದಿದೆ. ಅವರ ಕನಸುಗಳನ್ನು ನನಸಾಗಿಸಲು ಭಾರತ ಬದ್ಧವಾಗಿದೆ. ಇದಕ್ಕಾಗಿ ನೇಪಾಳದಲ್ಲಿ ಐಐಟಿ ಕ್ಯಾಂಪಸ್, ಸ್ಟಾರ್ಟ್‌ಅಪ್ ಇನ್‌ಕ್ಯುಬೇಟರ್ ಮತ್ತು ಇನ್ನೋವೇಶನ್ ಹಬ್ ತೆರೆಯಲಾಗುವುದು. ಜೊತೆಗೆ ಕಾನೂನು ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಭಾರತದಲ್ಲಿ ವ್ಯಾಸಂಗ ಮಾಡುವ ನೇಪಾಳಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಅವಕಾಶಗಳನ್ನು ವಿಸ್ತರಿಸಲಾಗುವುದು” ಎಂದು ಮೋದಿ ತಿಳಿಸಿದರು.

ಪ್ರವಾಹ ಪುನರ್‌ನಿರ್ಮಾಣಕ್ಕೆ 24,000 ಕೋಟಿ ಪ್ಯಾಕೇಜ್

ಕಳೆದ ಆಗಸ್ಟ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಿದ ಮೋದಿ, ಸಂತ್ರಸ್ತ ಕುಟುಂಬಗಳ ಬದುಕು ಕಟ್ಟಿಕೊಡಲು ಹಾಗೂ ದೀರ್ಘಕಾಲೀನ ಅಭಿವೃದ್ಧಿಗಾಗಿ 24,000 ಕೋಟಿ ನೇಪಾಳಿ ರೂಪಾಯಿಗಳ ‘ಅಭಿವೃದ್ಧಿ ಸಹಕಾರ ಪ್ಯಾಕೇಜ್’ ಘೋಷಿಸಿದರು.

ಕೃಷಿ, ಕ್ರೀಡೆ ಮತ್ತು ಮಾಧ್ಯಮ ಸಹಕಾರ

ನೇಪಾಳದಲ್ಲಿ ಆಹಾರ ಸಂಸ್ಕರಣೆಗೆ ಉತ್ತೇಜನ ನೀಡಲು ‘ಅಗ್ರೋ-ಇಂಡಸ್ಟ್ರಿಯಲ್ ಪಾರ್ಕ್’ ಅಭಿವೃದ್ಧಿಪಡಿಸಲು ಭಾರತ ಕೈಜೋಡಿಸಲಿದೆ. ಅಲ್ಲದೆ, ಮುಂಬರುವ ‘ವೇವ್ಸ್’ (WAVES) ಶೃಂಗಸಭೆಯಲ್ಲಿ ನೇಪಾಳದ ಯುವ ಕಲಾವಿದರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು ಹಾಗೂ ನೇಪಾಳದ ಕ್ರಿಕೆಟ್ ಮೂಲಸೌಕರ್ಯ ಮತ್ತು ಆಟಗಾರರ ತರಬೇತಿಗೂ ಭಾರತ ಬೆಂಬಲ ನೀಡಲಿದೆ ಎಂದು ಪ್ರಧಾನಿ ಹೇಳಿದರು.

ಬಾಲೆನ್ ಶಾ ನಾಯಕತ್ವಕ್ಕೆ ಮೋದಿ ಮೆಚ್ಚುಗೆ

ನೇಪಾಳದ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಬಾಲೇಂದ್ರ ಶಾ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಪ್ರಧಾನಿ ಮೋದಿ, “ಕೆಲವು ತಿಂಗಳ ಹಿಂದೆ ವಿಶ್ವದ ಅತ್ಯಂತ ಕಿರಿಯ ಪ್ರಧಾನಿಯಾಗಿ ಬಾಲೇಂದ್ರ ಶಾ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಅವರ ದೂರದೃಷ್ಟಿ ಕಂಡಿತ್ತು. ನೇಪಾಳದ ಜನರು ಅವರಿಗೆ ನೀಡಿರುವ ಐತಿಹಾಸಿಕ ಜನಾದೇಶವು ಅಲ್ಲಿನ ಹೊಸ ಪೀಳಿಗೆಯ ಆಶೋತ್ತರಗಳ ಪ್ರತಿಬಿಂಬವಾಗಿದೆ” ಎಂದು ಶ್ಲಾಘಿಸಿದರು. ಉಭಯ ದೇಶಗಳ ಸಂಬಂಧವು ಆತ್ಮೀಯ ಬಾಂಧವ್ಯ ಮತ್ತು ಮುರಿಯದ ನಂಬಿಕೆಯ ಮೇಲೆ ನಿಂತಿದೆ ಎಂದು ಅವರು ತಿಳಿಸಿದರು.

Must Read