ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಅನುಭವಿಸುತ್ತಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕಾರಾಗೃಹ ಇಲಾಖೆ ಶಾಕ್ ನೀಡಿದೆ. ಜೈಲಿನಲ್ಲಿ ಸ್ಮಾರ್ಟ್‌ಫೋನ್ ಪತ್ತೆಯಾದ ಪ್ರಕರಣದ ಬೆನ್ನಲ್ಲೆ ಡಿಜಿಪಿ ಅಲೋಕ್ ಕುಮಾರ್ ಅವರು, ಪ್ರಜ್ವಲ್ ರೇವಣ್ಣನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ಆದೇಶಿಸಿದ್ದಾರೆ.
ಹಿಂಡಲಗಾ ಜೈಲಿಗೆ ಅಧಿಕೃತ ಇ-ಮೇಲ್ ರವಾನೆ
ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಾರಾಗೃಹ ಇಲಾಖೆಯು ಬೆಳಗಾವಿ ಜೈಲಿನ ಮುಖ್ಯ ಅಧೀಕ್ಷಕರಿಗೆ ಅಧಿಕೃತ ಇ-ಮೇಲ್ ಮೂಲಕ ಸಂದೇಶ ರವಾನಿಸಿದೆ. ಯಾವುದೇ ಕ್ಷಣದಲ್ಲಿ ಪ್ರಜ್ವಲ್‌ನನ್ನು ಬೆಂಗಳೂರಿನಿಂದ ಬೆಳಗಾವಿಗೆ ಕರೆದೊಯ್ಯುವ ಸಾಧ್ಯತೆಯಿದ್ದು, ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಲ್ಲಿನ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಸಿಸಿಬಿ ದಾಳಿಯಲ್ಲಿ ಬಯಲಾಗಿತ್ತು ಕಳ್ಳಾಟ
ಆಗಸ್ಟ್ 11ರಂದು ಸಿಸಿಬಿಯ ಹಿರಿಯ ಅಧಿಕಾರಿಗಳಾದ ಡಿಸಿಪಿ ಹರಿಬಾಬು ಹಾಗೂ ಇಮಾಮ್ ಖಾಸೀಂ ನೇತೃತ್ವದ ವಿಶೇಷ ತಂಡವು ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿತ್ತು. ಈ ವೇಳೆ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಸ್ಮಾರ್ಟ್‌ಫೋನ್, ಚಾರ್ಜರ್, ಒಂದು ಪೆನ್ ಡ್ರೈವ್ ಪತ್ತೆಯಾಗಿತ್ತು. ಇನ್ನು ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ವರದಿಯ ಪ್ರಕಾರ, ಜೈಲಿನಲ್ಲಿ ಸಿಕ್ಕ ಮೊಬೈಲ್‌ನಲ್ಲಿ ವಾಟ್ಸಾಪ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾ ಆ್ಯಪ್‌ಗಳು ಹಾಗೂ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋದಂತಹ ಓಟಿಟಿ ಆ್ಯಪ್‌ಗಳನ್ನು ಇರುವುದು ತಿಳಿದುಬಂದಿದೆ.
ಇದನ್ನೂ ಓದಿ:
ಫೋಟೋ ವೈರಲ್ ಬೆನ್ನಲ್ಲೇ ತನಿಖೆ
ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಜೈಲಿನ ಒಳಗಡೆ ಕುಳಿತು ರಾಜಾರೋಷವಾಗಿ ಫೋನ್‌ನಲ್ಲಿ ಮಾತನಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಂಡು ಇಡೀ ಜೈಲು ಇಲಾಖೆಗೆ ಭಾರಿ ಮುಖಭಂಗ ಉಂಟುಮಾಡಿತ್ತು. ಈ ಪ್ರಕರಣದಲ್ಲಿ ಜೈಲಿನ ಅಧಿಕಾರಿಗಳ ನಿರ್ಲಕ್ಷ್ಯ ಮೇಲ್ನೋಟಕ್ಕೇ ಸಾಬೀತಾದ ಹಿನ್ನೆಲೆಯಲ್ಲಿ, ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ಉನ್ನತ ಮಟ್ಟದ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಜೈಲಿನ ಕೋಣೆಯೊಳಗೆ ಇಷ್ಟೆಲ್ಲಾ ಡಿಜಿಟಲ್ ಗ್ಯಾಜೆಟ್‌ಗಳು ಹೇಗೆ ಸರಬರಾಜಾದವು ಎಂಬ ಬಗ್ಗೆ ಸಮಗ್ರ ವರದಿ ನೀಡಲು ಡಿಜಿಪಿ ಅಲೋಕ್ ಕುಮಾರ್ ಗಡುವು ನೀಡಿದ್ದಾರೆ.



