ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಪ್ರತಿಯೊಬ್ಬರಲ್ಲೂ ‘ಫ್ಯಾಟಿ ಲಿವರ್’ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಆರಂಭದಲ್ಲಿ ಇದು ಕಾಮನ್ ಆಗಿ ಕಂಡರೂ, ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಮತ್ತು ಜೀವನಶೈಲಿ ಬದಲಾವಣೆ ಮಾಡಿಕೊಳ್ಳದಿದ್ದರೆ, ಅಪಾಯಕಾರಿ ಲಿವರ್ ಕ್ಯಾನ್ಸರ್ ಆಗಿ ಬದಲಾಗಬಹುದು.
ಫ್ಯಾಟಿ ಲಿವರ್ ಒಮ್ಮೆಲೇ ಕ್ಯಾನ್ಸರ್ ಆಗುವುದಿಲ್ಲ. ಆರಂಭದಲ್ಲಿ ಯಕೃತ್ತಿನಲ್ಲಿ ಕೊಬ್ಬು ತುಂಬಿ ಉರಿಯೂತ ಉಂಟಾಗುತ್ತದೆ. ನಂತರ ಲಿವರ್ ಜೀವಕೋಶಗಳು ಹಾನಿಗೊಳಗಾಗಿ ಗಾಯದ ಗಂಟುಗಳು ಉಂಟಾಗುತ್ತವೆ. ಈ ಹಂತವನ್ನು ನಿರ್ಲಕ್ಷಿಸಿದರೆ ಲಿವರ್ ಕಠಿಣವಾಗಿ ಕೆಲಸ ಮಾಡುವುದನ್ನು ನಿಲ್ಲಿಸುವ ‘ಸಿರೋಸಿಸ್’ ಹಂತ ತಲುಪುತ್ತದೆ. ಸಿರೋಸಿಸ್ ಹಂತಕ್ಕೆ ತಲುಪಿದಾಗ ಲಿವರ್ ಜೀವಕೋಶಗಳಲ್ಲಿ ಹಾನಿಯಾಗಿ, ಕೊನೆಗೆ ಅದು ‘ಲಿವರ್ ಕ್ಯಾನ್ಸರ್’ ಗೆ ದಾರಿ ಮಾಡಿಕೊಡುತ್ತದೆ.
ಏಳು ಎಚ್ಚರಿಕೆಯ ಲಕ್ಷಣಗಳು
ಹೊಟ್ಟೆಯ ಮೇಲ್ಭಾಗದ ಬಲಗಡೆ ಜಾಗದಲ್ಲಿ ನಿರಂತರವಾದ ನೋವು ಅಥವಾ ಭಾರವೆನಿಸುವುದು.
ಯಾವುದೇ ಕಾರಣವಿಲ್ಲದೆ ತೂಕ ಕಡಿಮೆಯಾಗುವುದು ಮತ್ತು ಆಹಾರದ ಮೇಲಿನ ಆಸಕ್ತಿ ಕಡಿಮೆಯಾಗುವುದು.
ಕಣ್ಣಿನ ಬಿಳಿ ಭಾಗ ಹಾಗೂ ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು.
ಹೊಟ್ಟೆ ಉಬ್ಬರಗೊಂಡು ನೀರು ತುಂಬಿದಂತಾಗುವುದು ಹಾಗೂ ಕಾಲುಗಳಲ್ಲಿ ಸತತವಾಗಿ ಊತ ಕಂಡುಬರುವುದು.
ವಿಶ್ರಾಂತಿ ಪಡೆದರೂ ಅತಿಯಾದ ಸುಸ್ತು, ದಣಿವು ಮತ್ತು ಶಕ್ತಿ ಇಲ್ಲದಿರುವುದು.
ತಿಂದ ಆಹಾರ ಜೀರ್ಣವಾಗದೆ ವಾಕರಿಕೆ ಉಂಟಾಗುವುದು.
ಚರ್ಮದ ಮೇಲೆ ನಿರಂತರ ತುರಿಕೆ ಉಂಟಾಗುವುದು ಮತ್ತು ಸಣ್ಣ ಏಟಿಗೂ ಅತಿಯಾದ ರಕ್ತಸ್ರಾವವಾಗುವುದು.
ಫ್ಯಾಟಿ ಲಿವರ್ ಸಮಸ್ಯೆ ಇರುವವರು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಸಕ್ಕರೆ ಕಾಯಿಲೆ, ಅಧಿಕ ತೂಕ ಮತ್ತು ಮದ್ಯಪಾನ ಮಾಡುವವರು ಈ ವಿಷಯದಲ್ಲಿ ಎಚ್ಚರ ವಹಿಸಬೇಕು. ಆರಂಭದಲ್ಲೇ ರೋಗಲಕ್ಷಣ ಗುರುತಿಸಿ ಚಿಕಿತ್ಸೆ ಪಡೆದರೆ ಲಿವರ್ ಕ್ಯಾನ್ಸರ್ನಂತಹ ಭೀಕರ ಅಪಾಯದಿಂದ ಪಾರಾಗಬಹುದು.



