ಇಂದಿನ ಜೀವನಶೈಲಿಯಲ್ಲಿ ದೇಹವನ್ನು ಚುರುಕಾಗಿಡುವುದು ಅತಿ ಮುಖ್ಯ. ಓಡುವುದು, ಈಜುವುದು, ವೇಗವಾಗಿ ನಡೆಯುವುದು, ಸೈಕ್ಲಿಂಗ್ ಅಥವಾ ಡ್ಯಾನ್ಸ್ ಮಾಡುವುದನ್ನೇ ನಾವು ‘ಕಾರ್ಡಿಯೋ’ ವ್ಯಾಯಾಮ ಎಂದು ಕರೆಯುತ್ತೇವೆ. ಇದರಿಂದ ನಮ್ಮ ಹೃದಯ ಬಡಿತ ಹೆಚ್ಚಾಗಿ, ಇಡೀ ದೇಹಕ್ಕೆ ಹೆಚ್ಚಿನ ಆಮ್ಲಜನಕ ಪೂರೈಕೆಯಾಗುತ್ತದೆ. ಪ್ರತಿಯೊಬ್ಬರೂ ಪ್ರತಿದಿನ ಮಾಡಲೇಬೇಕಾದ ಈ ವ್ಯಾಯಾಮದಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ.
ಕಾರ್ಡಿಯೋ ವ್ಯಾಯಾಮವು ನಮ್ಮ ಹೃದಯದ ಸ್ನಾಯುಗಳನ್ನು ಬಲಪಡಿಸುತ್ತದೆ. ಇದರಿಂದ ಹೃದಯವು ದೇಹದ ಪ್ರತಿಯೊಂದು ಭಾಗಕ್ಕೂ ರಕ್ತವನ್ನು ಸುಲಭವಾಗಿ ಪಂಪ್ ಮಾಡುತ್ತದೆ. ಪರಿಣಾಮವಾಗಿ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಮತ್ತು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯ ತಪ್ಪುತ್ತದೆ.
ಹೆಚ್ಚಿನ ದೈಹಿಕ ಶ್ರಮವಿಲ್ಲದೆ ಸದಾ ಕುಳಿತು ಕೆಲಸ ಮಾಡುವವರಿಗೆ ಕಾರ್ಡಿಯೋ ಅತ್ಯುತ್ತಮ ಔಷಧ. ಇದು ದೇಹದಲ್ಲಿರುವ ಹೆಚ್ಚಿನ ಕ್ಯಾಲೊರಿ ಹಾಗೂ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಕೇವಲ 30 ನಿಮಿಷಗಳ ಕಾರ್ಡಿಯೋ ನಿಮ್ಮನ್ನು ಎಂದೆಂದಿಗೂ ಫಿಟ್ ಆಗಿಡುತ್ತದೆ.
ನಿರಂತರವಾಗಿ ಕಾರ್ಡಿಯೋ ವ್ಯಾಯಾಮ ಮಾಡುವುದರಿಂದ ಟೈಪ್-2 ಮಧುಮೇಹ, ಹೃದಯಾಘಾತ, ಪಾರ್ಶ್ವವಾಯು ಮತ್ತು ಕೆಲವು ರೀತಿಯ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 40ರಷ್ಟು ಕಡಿಮೆಯಾಗುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ.
ಕಾರ್ಡಿಯೋದಿಂದ ಶ್ವಾಸಕೋಶದ ಗಾಳಿ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಇದರಿಂದ ದಿನವಿಡೀ ಆಯಾಸವಿಲ್ಲದೆ, ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ವಯಸ್ಸಾದಂತೆ ಬರುವ ಆಯಾಸ ಹಾಗೂ ಮೆದುಳಿನ ಮರೆವಿನ ಸಮಸ್ಯೆಗೆ ಇದು ಬ್ರೇಕ್ ಹಾಕುತ್ತದೆ.
ಯಾವುದೇ ದುಬಾರಿ ಉಪಕರಣಗಳ ಹಂಗಿಲ್ಲದೆ, ಕೇವಲ ದಿನಕ್ಕರ್ಧ ಗಂಟೆ ಚುರುಕಿನ ನಡಿಗೆ ಅಥವಾ ಓಟದಿಂದಲೇ ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳಬಹುದು. ಇಂದಿನಿಂದಲೇ ಕಾರ್ಡಿಯೋ ಆರಂಭಿಸಿ, ಸದಾ ಹಸನ್ಮುಖಿಯಾಗಿ ಬಾಳಿ.



