ಬೆಳಗ್ಗೆ ಎದ್ದ ತಕ್ಷಣ ಇವತ್ತು ತಿಂಡಿಗೆ ಏನು ಮಾಡುವುದು ಎಂಬ ಚಿಂತೆ ಎಲ್ಲರಿಗೂ ಇದ್ದೇ ಇರುತ್ತದೆ. ಅದರಲ್ಲೂ ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಿರುವವರಿಗೆ ಹಾಗೂ ಮಧುಮೇಹ ಇರುವವರಿಗಂತೂ ಬ್ರೇಕ್‌ಫಾಸ್ಟ್ ಆಯ್ಕೆ ಮಾಡುವುದು ದೊಡ್ಡ ಕೆಲಸ. ಅಂಥವರಿಗಾಗಿ ಈ ಮಸಾಲ ಓಟ್ಸ್ ಇಡ್ಲಿ ರೆಸಿಪಿ.
ಬೇಕಾಗುವ ಸಾಮಗ್ರಿಗಳು
ಓಟ್ಸ್
ರವೆ
ಮೊಸರು
ತುರಿದ ಕ್ಯಾರೆಟ್
ಸಾಸಿವೆ, ಜೀರಿಗೆ
ಕಡಲೆಬೇಳೆ, ಉದ್ದಿನಬೇಳೆ
ಹಸಿ ಮೆಣಸಿನಕಾಯಿ, ಕರಿಬೇವು
ಅಡುಗೆ ಸೋಡಾ
ಎಣ್ಣೆ ಉಪ್ಪು ಮತ್ತು ನೀರು
ಮಾಡುವ ವಿಧಾನ
ಮೊದಲು ಓಟ್ಸ್ ಅನ್ನು ಬಾಣಲೆಯಲ್ಲಿ 2 ನಿಮಿಷ ಹುರಿದು, ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಅದೇ ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವು ಮತ್ತು ಹಸಿ ಮೆಣಸಿನಕಾಯಿ ಹಾಕಿ ಹುರಿದು, ಇದೇ ಒಗ್ಗರಣೆಗೆ ರವೆ ಮತ್ತು ತುರಿದ ಕ್ಯಾರೆಟ್ ಸೇರಿಸಿ ಸಣ್ಣ ಉರಿಯಲ್ಲಿ 3 ನಿಮಿಷ ಚೆನ್ನಾಗಿ ಬಾಡಿಸಬೇಕು.
ನಂತರ ಒಂದು ಪಾತ್ರೆಯಲ್ಲಿ ಓಟ್ಸ್ ಪುಡಿ, ಹುರಿದ ರವೆ ಮಿಶ್ರಣ, ಮೊಸರು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ 10 ನಿಮಿಷ ಪಕ್ಕಕ್ಕೆ ಇಡಬೇಕು. ಇಡ್ಲಿ ಹಿಟ್ಟಿಗೆ ಅರ್ಧ ಚಮಚ ಅಡುಗೆ ಸೋಡಾ ಸೇರಿಸಿ ಮಿಕ್ಸ್ ಮಾಡಿ ಎಣ್ಣೆ ಸವರಿದ ಇಡ್ಲಿ ತಟ್ಟೆಗಳಿಗೆ ಹಿಟ್ಟನ್ನು ಹಾಕಿ, ಇಡ್ಲಿ ಪಾತ್ರೆಯಲ್ಲಿ 10 ರಿಂದ 12 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿದರೆ ಬಿಸಿಬಿಸಿ ಓಟ್ಸ್ ಇಡ್ಲಿ ಸಿದ್ಧ.



