October 10, 2026
Saturday, October 10, 2026
spot_img

KKPL | ಚಾಂಪಿಯನ್ ಪಟ್ಟ ಅಲಂಕರಿಸಿದ ಉತ್ತರ ಕನ್ನಡ ಸ್ಟಾಲಿಯನ್ಸ್: ತೊಕ್ಕೊಟ್ಟಿನ ಸಾಯಿಪ್ರಸಾದ್‌ಗೆ ಬೆಸ್ಟ್ ಪ್ಲೇಯರ್ ಪ್ರಶಸ್ತಿ

ಹೊಸದಿಗಂತ ವರದಿ ಉಳ್ಳಾಲ:

ಬೆಂಗಳೂರಿನಲ್ಲಿ ನಡೆದ ಪ್ರತಿಷ್ಠಿತ ಶಂಖ ತೀರ್ಥ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL) ಸೀಸನ್–1ರ ಪಂದ್ಯಾವಳಿಯಲ್ಲಿ ಅತ್ಯುತ್ತಮ‌ ಪ್ರದರ್ಶನ ನೀಡಿದ ತೊಕ್ಕೊಟ್ಟು ಕಾಪಿಕಾಡ್‌ ನಿವಾಸಿ ಸಾಯಿಪ್ರಸಾದ್ ಅವರು ಶ್ರೇಷ್ಟ ಆಟಗಾರ ಪ್ರಶಸ್ತಿಗೆ ಭಾಜನರಾಗಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ ಪಂದ್ಯಾವಳಿಯಲ್ಲಿ ಅತಿ ಹೆಚ್ಚಿನ ಬಿಡ್‌ಗೆ ಆಯ್ಕೆಯಾಗಿದ್ದ ಸಾಯಿಪ್ರಸಾದ್ ಅವರು ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದರು.ಪಂದ್ಯಾವಳಿಯಲ್ಲಿ ಎಂಟು ಜಿಲ್ಲೆಯ ಪ್ರಾಂಚೈಸಿ ತಂಡಗಳು ಭಾಗವಹಿಸಿದ್ದವು.

ಹೊಯ್ಸಳ ಅಂಪಾಯರ್ ಹಾಸನ V/S ಮಂಗಳೂರು ಇಂಡಿಯನ್ಸ್ ಹಾಗೂ ಮೈಸೂರು ಮಹಾಸೇನೆ V/S ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡಗಳು ಸೆಮಿಫೈನಲ್ ಪಂದ್ಯಗಳಲ್ಲಿ ಪರಸ್ಪರ ಸೆಣಸಾಡಿದ್ದವು.

ಗುರುವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡವು‌ ಮಂಗಳೂರು ಇಂಡಿಯನ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಸಾಯಿ ಪ್ರಸಾದ್ ಅವರು ಮಹತ್ವದ ಪಾತ್ರ ವಹಿಸಿದ್ದಲ್ಲದೆ, ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ‘ಬೆಸ್ಟ್ ಪ್ಲೇಯರ್’ (ಶ್ರೇಷ್ಠ ಆಟಗಾರ) ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಾಯಿಪ್ರಸಾದ್ ಅವರು ಮಾಜಿ ರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಗೋಪಿನಾಥ್ ಕಾಪಿಕಾಡು ಅವರ ಸುಪುತ್ರರಾಗಿದ್ದು ಕಾಪಿಕಾಡುವಿನ ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯ ಆಟಗಾರರಾಗಿದ್ದಾರೆ. ಸಾಯಿಪ್ರಸಾದ್ ಅವರ ಸಾಧನೆಗೆ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯ ಅಧ್ಯಕ್ಷರಾದ ಎ.ಜೆ.ಶೇಖರ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಅಭಿನಂದನೆಗಳನ್ನ‌ ಸಲ್ಲಿಸಿದ್ದಾರೆ.

ಸ್ಥಳೀಯ ಕ್ರೀಡಾಪಟುವಿನ ಈ ಸಾಧನೆಯು ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಸಾಯಿಪ್ರಸಾದ್ ಅವರು ಕಬಡ್ಡಿ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡುವ ನಿರೀಕ್ಷೆ ಹೆಚ್ಚಿಸಿದೆ.

Must Read