October 11, 2026
Sunday, October 11, 2026
spot_img

ಹೊಗಳಿಕೆ ಕೇಳಿದ ತಕ್ಷಣ ಮುಜುಗರವೇ? ಪ್ರಶಂಸೆ ಸ್ವೀಕರಿಸಲು ಮನಸ್ಸು ಹಿಂಜರಿಯುವುದೇಕೆ?

ಯಾರಾದರೂ ನಮ್ಮನ್ನು ಹೊಗಳಿದಾಗ ಅಥವಾ ಪ್ರಶಂಸಿಸಿದಾಗ ನಮಗೆ ಮುಜುಗರ, ಸಂಕೋಚ, ಅಸಹಜತೆ ಅನಿಸುವುದು ಸಹಜ. “ಅಯ್ಯೋ ಅಷ್ಟೇನೂ ಇಲ್ಲ ಬಿಡಿ” ಎಂದೋ ಅಥವಾ ಏನನ್ನಬೇಕೆಂದು ತಿಳಿಯದೆ ಸುಮ್ಮನಾಗುವುದು ಹೆಚ್ಚಿನವರು ಮಾಡುವ ಕೆಲಸ. ಈ ರೀತಿಯ ಭಾವನೆ ನಮಗೇಕೆ ಬರುತ್ತದೆ? ಇದರ ಹಿಂದೆ ಯಾವ ಮಾನಸಿಕ ಕಾರಣಗಳಿವೆ ಗೊತ್ತಿದ್ಯಾ?

ಸೆಲ್ಫ್ ಇಮೇಜ್

ನಮ್ಮ ಬಗ್ಗೆ ನಮಗಿರುವ ಕಲ್ಪನೆಗೂ ಇತರರು ನಮ್ಮನ್ನು ನೋಡುವ ವಿಧಾನಕ್ಕೂ ವ್ಯತ್ಯಾಸವಿದ್ದಾಗ ಈ ಮುಜುಗರ ಹುಟ್ಟುತ್ತದೆ. ನಾವು ನಮ್ಮಲ್ಲಿರುವ ಕೊರತೆಗಳು ಮತ್ತು ತಪ್ಪುಗಳನ್ನೇ ಹೆಚ್ಚಾಗಿ ನೆನಪಿನಲ್ಲಿಟ್ಟಿರುತ್ತೇವೆ. ಆದರೆ, ಬೇರೆಯವರು ನಮ್ಮ ಸಾಧನೆ ಅಥವಾ ರೂಪವನ್ನು ಹೊಗಳಿದಾಗ, ನಮ್ಮ ಮನಸ್ಸು ಅದನ್ನು ತಕ್ಷಣವೇ ಸ್ವೀಕರಿಸಲು ನಿರಾಕರಿಸುತ್ತದೆ.

ನೋ ಸೆಲ್ಫ್ ಕಾನ್ಫಿಡೆನ್ಸ್

ನಮ್ಮ ಮೇಲೆ ನಮಗೆ ಸಂಪೂರ್ಣ ನಂಬಿಕೆ ಅಥವಾ ತೃಪ್ತಿ ಇಲ್ಲದಿದ್ದಾಗ, ಯಾರಾದರೂ ನೀಡುವ ಪ್ರಶಂಸೆ ನಮಗೆ ಸುಳ್ಳು ಎನಿಸಬಹುದು. “ನಾನು ನಿಜವಾಗಿಯೂ ಇದಕ್ಕೆ ಅರ್ಹನೇ?” ಎನ್ನುವ ಸಂಶಯ ಮನಸ್ಸಿನಲ್ಲಿ ಮೂಡುವುದರಿಂದ ನಮಗೆ ಮುಜುಗರ ಉಂಟಾಗುತ್ತದೆ.

ಇಂಪೋಸ್ಟರ್ ಸಿಂಡ್ರೋಮ್

ಕೆಲವೊಮ್ಮೆ ಪ್ರಶಂಸೆ ಸಿಕ್ಕಾಗ “ನಾನು ಜನರನ್ನು ವಂಚಿಸುತ್ತಿದ್ದೇನೆಯೇನೋ” ಅಥವಾ “ನನ್ನ ಅದೃಷ್ಟದಿಂದ ಹೀಗಾಯಿತು, ನನ್ನಲ್ಲಿ ಅಷ್ಟು ಪ್ರತಿಭೆಯಿಲ್ಲ” ಎಂದು ಕೀಳರಿಮೆ ಕಾಡಬಹುದು. ಇದನ್ನು ಮಾನಸಿಕ ವಿಜ್ಞಾನದಲ್ಲಿ ‘ಇಂಪೋಸ್ಟರ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ. ಪ್ರಶಂಸೆ ಕೇಳಿದ ತಕ್ಷಣ ಈ ಕೀಳರಿಮೆ ಹೆಚ್ಚಾಗಿ ಮುಜುಗರ ತರುತ್ತದೆ.

ನಿರೀಕ್ಷೆಯ ಭಯ

ಯಾರಾದರೂ ನಮ್ಮ ಕೆಲಸವನ್ನು ಮೆಚ್ಚಿದಾಗ, ಮುಂದಿನ ದಿನಗಳಲ್ಲಿ ಅವರ ನಿರೀಕ್ಷೆ ನಮ್ಮ ಮೇಲೆ ಹೆಚ್ಚಾಗುತ್ತದೆ ಎನ್ನುವ ಭಯ ಮೂಡುತ್ತದೆ. “ಮುಂದೆಯೂ ನಾನು ಇದೇ ರೀತಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವೇ?” ಎಂಬ ಆತಂಕ ಮನಸ್ಸಿನಲ್ಲಿ ಮೂಡುವುದರಿಂದ ಪ್ರಶಂಸೆಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.

ಪ್ರಶಂಸೆ ಸ್ವೀಕರಿಸುವುದು ಹೇಗೆ?

ಪ್ರಶಂಸೆಯನ್ನು ತಳ್ಳಿಹಾಕುವ ಬದಲು ಮುಗುಳ್ನಗುವಿನೊಂದಿಗೆ “ಧನ್ಯವಾದಗಳು” ಎಂದು ಸ್ವೀಕರಿಸುವುದನ್ನು ಕಲಿಯಬೇಕು. ಇತರರು ನೀಡುವ ಪ್ರಶಂಸೆ ಅವರ ಪ್ರೀತಿ ಮತ್ತು ಗೌರವದ ಸಂಕೇತ ಎಂಬುದನ್ನು ನೆನಪಿನಲ್ಲಿಟ್ಟುಕೊಂಡಾಗ, ಮುಜುಗರ ದೂರವಾಗಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

Must Read