October 11, 2026
Sunday, October 11, 2026
spot_img

ರಿಯಾದ್ ಏರ್‌ಪೋರ್ಟ್‌ ದಾಳಿಗೆ 12 ಬಲಿ, 300ಕ್ಕೂ ಹೆಚ್ಚು ಜನರಿಗೆ ಗಾಯ: ಹೌತಿಗಳ ವಿರುದ್ಧ ದಾಳಿಗೆ ಟ್ರಂಪ್ ಪ್ಲ್ಯಾನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸೌದಿ ಅರೇಬಿಯಾ ಮತ್ತು ಇರಾನ್ ಬೆಂಬಲಿತ ಹೌತಿ ಬಂಡುಕೋರರ ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ. ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದೇಶೀಯ ವಿಮಾನಗಳ ಟರ್ಮಿನಲ್ 3 ಮತ್ತು 4 ಅನ್ನು ಗುರಿಯಾಗಿಸಿ ಹೌತಿ ಬಂಡುಕೋರರು ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಓರ್ವ ಅಮೆರಿಕ ಪ್ರಜೆ ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇರಾನ್ ಯುದ್ಧ ಆರಂಭವಾದಾಗಿನಿಂದ ಗಲ್ಫ್ ಅರಬ್ ರಾಷ್ಟ್ರವೊಂದರಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಸೌದಿ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ದಾಳಿಯ ವಿವರ

ಪ್ರಾದೇಶಿಕ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ರಿಯಾದ್ ವಿಮಾನ ನಿಲ್ದಾಣದ ದೇಶೀಯ ಟರ್ಮಿನಲ್‌ಗಳ ಸಂಕೀರ್ಣಕ್ಕೆ ಕ್ಷಿಪಣಿ ನೇರವಾಗಿ ಬಂದು ಅಪ್ಪಳಿಸಿದೆ. ಮೃತರ ಪೈಕಿ ನಾಲ್ವರು ಸೌದಿ ನಾಗರಿಕರು, ಇಬ್ಬರು ಬಾಂಗ್ಲಾದೇಶದವರು ಹಾಗೂ ಅಮೆರಿಕ, ಈಜಿಪ್ಟ್, ಜೋರ್ಡಾನ್, ಪ್ಯಾಲೆಸ್ಟೈನ್, ಸಿರಿಯಾ ಮತ್ತು ಸುಡಾನ್ ದೇಶಗಳ ತಲಾ ಒಬ್ಬೊಬ್ಬ ಪ್ರಜೆಗಳು ಸೇರಿದ್ದಾರೆ. ಗಾಯಾಳುಗಳಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ರಿಯಾದ್‌ನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ದಾಳಿಯ ಬೆನ್ನಲ್ಲೇ ರಿಯಾದ್ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಎಲ್ಲಾ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ. ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಕೆನಡಾ ದೇಶಗಳು ತಮ್ಮ ನಾಗರಿಕರಿಗೆ ಈ ವಿಮಾನ ನಿಲ್ದಾಣಕ್ಕೆ ಹೋಗದಂತೆ ಎಚ್ಚರಿಕೆ ನೀಡಿವೆ.

ಹೌತಿಗಳ ವಿರುದ್ಧ ದಾಳಿಗೆ ಟ್ರಂಪ್ ಪ್ಲ್ಯಾನ್

ಈ ಭೀಕರ ದಾಳಿ ನಡೆದ ತಕ್ಷಣವೇ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ʼಸೌದಿ ಅರೇಬಿಯಾದಲ್ಲಿ ನಡೆದಿರುವುದು ಖಂಡಿತವಾಗಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕೃತ್ಯ. ಹೌತಿ ಬಂಡುಕೋರರ ವಿರುದ್ಧದ ಸೌದಿ ಮೈತ್ರಿಕೂಟದ ವಾಯುದಾಳಿಗೆ ಅಮೆರಿಕ ಕೂಡ ಕೈಜೋಡಿಸುವ ಬಗ್ಗೆ ನಾವು ಗಂಭೀರವಾಗಿ ಯೋಚಿಸುತ್ತಿದ್ದೇವೆ. ನಾವು ಈ ಬಗ್ಗೆ ಶೀಘ್ರದಲ್ಲೇ   ನಿರ್ಧಾರ ತೆಗೆದುಕೊಳ್ಳಲಿದ್ದೇವೆʼ ಎಂದು ಎಚ್ಚರಿಸಿದ್ದಾರೆ.

 ಅಲ್ಲದೆ, ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ಈ ಕುರಿತು ಮಾತನಾಡುವುದಾಗಿ ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಕೂಡ ದಾಳಿಯಲ್ಲಿ ಅಮೆರಿಕ ಪ್ರಜೆ ಸಾವನ್ನಪ್ಪಿರುವುದನ್ನು ಖಚಿತಪಡಿಸಿದ್ದು, ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇರಾನ್ ಹಡಗಿನ ಮೇಲೆ ಅಮೆರಿಕ ವಾಯುದಾಳಿ

ಇದೇ ವೇಳೆ ಓಮನ್ ಗಲ್ಫ್‌ನಲ್ಲಿ ಇರಾನಿನ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ಕಾಯ್ದುಕೊಳ್ಳುವ ಅಮೆರಿಕದ ಪ್ರಯತ್ನದ ಭಾಗವಾಗಿ, ಯುಎಸ್ ಸೆಂಟ್ರಲ್ ಕಮಾಂಡ್ ಇರಾನ್ ಬಂದರಿನಿಂದ ಹೊರಟಿದ್ದ ಪನಾಮ ಧ್ವಜದ ‘ಎಂ/ವಿ ಓಷನ್ ಮೋಲಿಕಾ’ ಎಂಬ ವಾಣಿಜ್ಯ ಸರಕು ಸಾಗಣೆ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿ ಅದನ್ನು ನಿಷ್ಕ್ರಿಯಗೊಳಿಸಿದೆ. ಹಡಗಿನ ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸೇನೆ ತಿಳಿಸಿದೆ.

ಏರ್ ಡಿಫೆನ್ಸ್ ಕೊರತೆ ಎದುರಿಸುತ್ತಿರುವ ಸೌದಿ ಅರೇಬಿಯಾ

ಸೌದಿ ಅರೇಬಿಯಾ ಜಾಗತಿಕವಾಗಿ ಅತಿ ದೊಡ್ಡ ತೈಲ ರಫ್ತುದಾರ ದೇಶವಾಗಿದ್ದು, ಈ ದಾಳಿಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಆದರೆ ಈ ಆತಂಕದ ನಡುವೆಯೂ ಸೌದಿ ಇಂಧನ ಸಚಿವಾಲಯವು ರಿಯಾದ್‌ನಲ್ಲಿ ಭಾನುವಾರದಿಂದ ಆರಂಭವಾಗಲಿರುವ ಜಾಗತಿಕ ಇಂಧನ ಸಮಾವೇಶವನ್ನು ಎಂದಿನಂತೆ ನಡೆಸುವುದಾಗಿ ಘೋಷಿಸಿದೆ. ಹೌತಿಗಳ ಸರಣಿ ದಾಳಿಯಿಂದಾಗಿ ಸೌದಿ ಅರೇಬಿಯಾದಲ್ಲಿ ಕ್ಷಿಪಣಿ ನಿರೋಧಕಗಳ ಕೊರತೆ ಉಂಟಾಗಿದ್ದು, ಇತ್ತೀಚೆಗಷ್ಟೇ ಸೌದಿ ಸರ್ಕಾರವು ಫ್ರಾನ್ಸ್, ಬ್ರಿಟನ್, ಪಾಕಿಸ್ತಾನ ಮತ್ತು ಈಜಿಪ್ಟ್ ದೇಶಗಳ ಬಳಿ ವಾಯು ರಕ್ಷಣಾ ಬೆಂಬಲವನ್ನು ಕೋರಿತ್ತು. ಪ್ರಸ್ತುತ ಕೆಂಪು ಸಮುದ್ರ ಮತ್ತು ರಿಯಾದ್ ವಲಯದಲ್ಲಿ ಪರಿಸ್ಥಿತಿ ಅತ್ಯಂತ ಉದ್ವಿಗ್ನಗೊಂಡಿದೆ.

Must Read