October 12, 2026
Monday, October 12, 2026
spot_img

ಹೊಸ Form 6ಗೆ ಸುಪ್ರೀಂ ಸಮ್ಮತಿ ಇಲ್ಲ: ಚುನಾವಣಾ ಆಯೋಗಕ್ಕೆ ಕೋರ್ಟ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿರುವ ಹೊಸ ಫಾರ್ಮ್ 6ಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ ಎಂಬ ವಿಚಾರಕ್ಕೆ ನ್ಯಾಯಾಲಯ ಸ್ಪಷ್ಟನೆ ನೀಡಿದೆ. ಬಿಹಾರದಲ್ಲಿ ನಡೆದ ಎಸ್‌ಐಆರ್‌ಗೆ ಸಂಬಂಧಿಸಿದ ವಿಚಾರಣೆ ವೇಳೆ ಹೊಸ ಫಾರ್ಮ್ 6 ಕುರಿತು ಯಾವುದೇ ತೀರ್ಪು ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಎಸ್‌ಐಆರ್‌ಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು, ಫಾರ್ಮ್ 6ಗೆ ಸುಪ್ರೀಂ ಕೋರ್ಟ್ ಅನುಮೋದನೆ ನೀಡಿದೆ ಎಂದು ಚುನಾವಣಾ ಆಯೋಗ ಹೇಳಿರುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ, ಹೊಸ ಫಾರ್ಮ್ 6 ಕುರಿತು ನ್ಯಾಯಾಲಯ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಹಾರದ ಎಸ್‌ಐಆರ್ ಪ್ರಕರಣದ ವಿಚಾರಣೆ ನಡೆದ ಸಂದರ್ಭದಲ್ಲಿ ಹೊಸ ಫಾರ್ಮ್ 6ರ ವಿಚಾರ ನ್ಯಾಯಾಲಯದ ಮುಂದಿರಲಿಲ್ಲ ಎಂದೂ ತಿಳಿಸಿದರು.

ಇದನ್ನೂ ಓದಿ:

ಏನಿದು ಪ್ರಕರಣ?

ಅಕ್ಟೋಬರ್ 5ರಂದು ನಡೆದ ಪ್ರತ್ಯೇಕ ವಿಚಾರಣೆಯಲ್ಲಿಯೂ ಸುಪ್ರೀಂ ಕೋರ್ಟ್, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿರುವ ಫಾರ್ಮ್ 6ರ ಬದಲಾವಣೆಗಳಿಗೆ ತಾನು ಅನುಮೋದನೆ ನೀಡಿಲ್ಲ ಎಂದು ಹೇಳಿತ್ತು.

ಆದರೆ, ಚುನಾವಣಾ ಆಯೋಗವು ಸೆಪ್ಟೆಂಬರ್ 26ರಂದು ಬಿಡುಗಡೆ ಮಾಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ, ಬಿಹಾರದ ಎಸ್‌ಐಆರ್‌ಗೆ ಸಂಬಂಧಿಸಿದ ಮೇ 2026ರ ತೀರ್ಪಿನಲ್ಲಿ ಫಾರ್ಮ್ 6ರಲ್ಲಿನ ಘೋಷಣೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂಬ ಅರ್ಥ ಬರುವಂತೆ ಉಲ್ಲೇಖಿಸಿತ್ತು.

ಮತದಾರರ ಪಟ್ಟಿಯಲ್ಲಿ ಭಗತ್ ಸಿಂಗ್ ಫೋಟೋ

ಈ ವಿವಾದದ ನಡುವೆ ಪಂಜಾಬ್‌ನ ಲುಧಿಯಾನ ಪೂರ್ವ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಹೋಲುವ ಫೋಟೋ ಕಾಣಿಸಿಕೊಂಡಿದೆ.

ಮತದಾರರ ಸಂಖ್ಯೆ 422ರ ಎದುರು ಈ ಫೋಟೋ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಸೇರಿದಂತೆ ಹಲವು ನಾಯಕರು ಮತದಾರರ ಪಟ್ಟಿಯ ನಿಖರತೆಯನ್ನು ಪ್ರಶ್ನಿಸಿದ್ದಾರೆ. ಅದೇ ಮತಗಟ್ಟೆಯ ಇತರ ಎಂಟು ನಮೂದುಗಳಲ್ಲೂ ತಪ್ಪಾದ ಫೋಟೋಗಳಿವೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಕ್ಷೇತ್ರದ ಎಲ್ಲ 235 ಮತಗಟ್ಟೆಗಳ ಪಟ್ಟಿಯನ್ನು ಪರಿಶೀಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿದೆ.

ಆದರೆ, ಜಿಲ್ಲಾಡಳಿತದ ಪ್ರಕಾರ, ಹಳೆಯ ಪಟ್ಟಿಯಲ್ಲಿದ್ದ ಫೋಟೋ ದೋಷವನ್ನು ವಿಶೇಷ ತೀವ್ರ ಪರಿಷ್ಕರಣೆ (SIR) ಸಂದರ್ಭದಲ್ಲಿ ಗುರುತಿಸಿ ಸರಿಪಡಿಸಲಾಗಿದೆ. ಅಕ್ಟೋಬರ್ 12ರಂದು ಪ್ರಕಟಿಸಲು ಉದ್ದೇಶಿಸಿದ್ದ ಅಂತಿಮ ಪಟ್ಟಿಯಲ್ಲಿ ಸರಿಯಾದ ಫೋಟೋ ಇರಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೂ, ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಕುರಿತು ರಾಜಕೀಯ ಚರ್ಚೆ ಮುಂದುವರಿದಿದೆ.

Must Read