ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಗಡಿಯೊಳಗೆ ನುಸುಳಲು ಯತ್ನಿಸಿದ ನಾಲ್ವರು ಪಾಕಿಸ್ತಾನಿ ಉಗ್ರರು ನೆಲಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.
ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ವಲಯದ ನಿಯಂತ್ರಣ ರೇಖೆ (ಎಲ್ಒಸಿ) ಸಮೀಪ ಸೋಮವಾರ ಈ ಘಟನೆ ನಡೆದಿದ್ದು, ಮೃತರಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಪ್ರಮುಖ ಕಮಾಂಡರ್ ಕೂಡ ಸೇರಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷ್ಣ ಘಾಟಿ ವಲಯದ ಸತ್ವಾಲ್-ನಾಕಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಪಾಕಿಸ್ತಾನದ ಕಡೆಯಿಂದ ವ್ಯಕ್ತಿಗಳ ಗುಂಪೊಂದು ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಧಾರಿತ ಸ್ಫೋಟಕ ಸಾಧನ (ಐಇಡಿ) ಅಥವಾ ನೆಲಬಾಂಬ್ ಸ್ಫೋಟಕ್ಕೆ ನಿಖರವಾಗಿ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ:
ಗಡಿಯಲ್ಲಿ ಭದ್ರತೆ ಹೆಚ್ಚಳ
ಸತ್ವಾಲ್-ನಾಕಿ ಪ್ರದೇಶವು ಈ ಹಿಂದೆ ಕೂಡ ಉಗ್ರರ ಒಳನುಸುಳುವ ಪ್ರಯತ್ನಗಳಿಗೆ ಬಳಕೆಯಾಗಿರುವ ಮಾರ್ಗವೆಂದು ಪರಿಗಣಿಸಲಾಗಿದೆ. ಘಟನೆ ಬಳಿಕ ಭದ್ರತಾ ಪಡೆಗಳು ಎಚ್ಚರಿಕೆ ಘೋಷಿಸಿದ್ದು, ನಿಯಂತ್ರಣ ರೇಖೆಯುದ್ದಕ್ಕೂ ಕಣ್ಗಾವಲು ಮತ್ತು ಭದ್ರತಾ ಕ್ರಮಗಳನ್ನು ಹೆಚ್ಚಿಸಿವೆ. ಗಡಿಯ ಪರಿಸ್ಥಿತಿಯನ್ನು ಪರಿಶೀಲಿಸುವುದರ ಜೊತೆಗೆ ಮತ್ತಷ್ಟು ನುಸುಳುವ ಪ್ರಯತ್ನಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ, ಮೆಂಧರ್ ವಲಯದ ಬಸೋನಿ ಪ್ರದೇಶದಲ್ಲಿ ಗಡಿ ಬೇಲಿಯ ಸಮೀಪ ಎರಡು ಹಳೆಯ ನೆಲಬಾಂಬ್ಗಳು ಪತ್ತೆಯಾಗಿವೆ. ಸೋಮವಾರ ಬೆಳಗ್ಗೆ ರಸ್ತೆ ನಿರ್ಮಾಣ ಕಾರ್ಯದ ವೇಳೆ ಈ ಸ್ಫೋಟಕಗಳು ಪತ್ತೆಯಾಗಿದ್ದು, ಸೇನೆಯ ತಜ್ಞರು ನಿಯಂತ್ರಿತ ಸ್ಫೋಟದ ಮೂಲಕ ಅವುಗಳನ್ನು ನಾಶಪಡಿಸಿದ್ದಾರೆ.
ಗಡಿ ಪ್ರದೇಶಗಳಲ್ಲಿ ಒಳನುಸುಳುವಿಕೆ ತಡೆಯಲು ನೆಲಬಾಂಬ್ಗಳನ್ನು ಅಳವಡಿಸಲಾಗಿರುತ್ತದೆ. ಭಾರೀ ಮಳೆಯಿಂದ ಅವು ಸ್ಥಳಾಂತರಗೊಂಡು ಅಪಾಯ ಉಂಟುಮಾಡುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



