ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಇಂದು ಆಂಧ್ರಪ್ರದೇಶದ ವಿಜಯವಾಡಕ್ಕೆ ಭೇಟಿ ನೀಡಲಿದ್ದಾರೆ. ಸಿಎಂ ಆದ ಬಳಿಕ ಮೊದಲ ಭೇಟಿ ಇದಾಗಿದ್ದು, ಸಿಎಂ ಎನ್. ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಕೃಷ್ಣಾ ನದಿ ನೀರಿನ ಹಂಚಿಕೆ, ಚೆನ್ನೈ ಮಹಾನಗರದ ಕುಡಿಯುವ ನೀರಿನ ಸಮಸ್ಯೆ, ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಗಳ ಬಗ್ಗೆ ಈ ಸಭೆಯಲ್ಲಿ ಮಾತುಕತೆ ನಡೆಯಲಿದೆ.
ಆಂಧ್ರ ಸರ್ಕಾರ ಗಡಿ ಭಾಗದಲ್ಲಿ ಕೆಲವು ಚೆಕ್ ಡ್ಯಾಮ್ ಹಾಗೂ ಜಲಾಶಯಗಳನ್ನು ನಿರ್ಮಿಸಲು ಹೊರಟಿದೆ. ಇದರಿಂದಾಗಿ ತಮಿಳುನಾಡಿಗೆ ನೀರಿನ ಹರಿವು ತಗ್ಗುವ ಆತಂಕವಿದ್ದು, ಈ ಬಗ್ಗೆ ಚರ್ಚೆ ಮಾಡಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಇದೆ. ಇನ್ನು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗೋದಾವರಿ ಕೃಷ್ಣಾ ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ಯಾವ ರಾಜ್ಯದ ಕೆಲಸ ಎಷ್ಟಿದೆ, ಪಾಲುದಾರಿಕೆ ಹೇಗಿರಲಿದೆ ಎನ್ನುವ ಬಗ್ಗೆ ಚರ್ಚೆ ನಡೆಸಲಾಗುವುದು.
ತೆಲುಗು ಗಂಗಾ ಯೋಜನೆಯಿಂದಾಗಿ ಚೆನ್ನೈನ ಕುಡಿಯುವ ನೀರಿನ ಅಗತ್ಯಗಳಿಗಾಗಿ ಆಂಧ್ರಪ್ರದೇಶದಿಂದ ವಾರ್ಷಿಕ 12 ಟಿಎಂಸಿ ನೀರು ಸರಬರಾಜಾಗಬೇಕಿದೆ. ಪ್ರಸ್ತುತ ಪೂರೈಕೆಯಲ್ಲಿ ಎದುರಾಗುತ್ತಿರುವ ಕೊರತೆ ಹಾಗೂ ತಾಂತ್ರಿಕ ಅಡೆತಡೆಗಳ ನಿವಾರಣೆಗೆ ವಿಜಯ್ ಒತ್ತಾಯಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.



