October 13, 2026
Tuesday, October 13, 2026
spot_img

ಅಂಗವೈಕಲ್ಯವನ್ನೇ ಮೆಟ್ಟಿ ನಿಂತು ಸ್ಫೂರ್ತಿಯಾಗಿದ್ದ ‘ಬ್ರೇಕಿಂಗ್ ಬ್ಯಾಡ್’ ನಟ ಆರ್.ಜೆ.ಮಿಟ್ಟೆ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದೆಲ್ಲೆಡೆ ಅಪಾರ ಜನಮನ್ನಣೆ ಗಳಿಸಿದ ಜನಪ್ರಿಯ ಟೆಲಿವಿಷನ್ ಶೋ ‘ಬ್ರೇಕಿಂಗ್ ಬ್ಯಾಡ್’ ಮೂಲಕ ಮನೆಮಾತಾಗಿದ್ದ ಪ್ರತಿಭಾವಂತ ಯುವ ನಟ ಆರ್.ಜೆ. ಮಿಟ್ಟ್ ತಮ್ಮ 34 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ವಾಲ್ಟರ್ ವೈಟ್ ಜೂನಿಯರ್ ಪಾತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳ ಮನಗೆದ್ದಿದ್ದ ಇವರ ಅನಿರೀಕ್ಷಿತ ಅಗಲಿಕೆ ಇಡೀ ಹಾಲಿವುಡ್ ಸಿನಿರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಬಾಲ್ಯದಿಂದಲೂ ಸೆರೆಬ್ರಲ್ ಪಾಲ್ಸಿ ಸಮಸ್ಯೆಯೊಂದಿಗೆ ಬದುಕು ನಡೆಸುತ್ತಿದ್ದ ಈ ಯುವ ನಟನ ಅಕಾಲಿಕ ಸಾವಿಗೆ ನಿಖರವಾದ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.

ನಟನೆಯ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಮಿಟ್ಟ್, 2008 ರಲ್ಲಿ ಆರಂಭವಾದ ‘ಬ್ರೇಕಿಂಗ್ ಬ್ಯಾಡ್’ ಸರಣಿಯಲ್ಲಿ ರಸಾಯನಶಾಸ್ತ್ರ ಶಿಕ್ಷಕನಾಗಿ ಅಪರಾಧ ಲೋಕಕ್ಕೆ ಕಾಲಿಡುವ ವಾಲ್ಟರ್ ವೈಟ್ ಅವರ ಹಿರಿಯ ಮಗನಾಗಿ ಕಾಣಿಸಿಕೊಂಡಿದ್ದರು. ತಮ್ಮ ನೈಜ ಜೀವನದ ದೈಹಿಕ ಸವಾಲುಗಳನ್ನೇ ವರವಾಗಿ ಬದಲಾಯಿಸಿಕೊಂಡು ತೆರೆಮೇಲೆ ಪಾತ್ರಕ್ಕೆ ಜೀವತುಂಬಿದ್ದ ಇವರು, ಜಗತ್ತಿನಾದ್ಯಂತ ಲಕ್ಷಾಂತರ ವೀಕ್ಷಕರ ಮೆಚ್ಚುಗೆ ಗಳಿಸಿದ್ದರು. ಕೇವಲ ನಟನೆಗೆ ಮಾತ್ರ ಸೀಮಿತವಾಗದೆ, ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಹಕ್ಕುಗಳಿಗಾಗಿ ಸತತವಾಗಿ ಧ್ವನಿ ಎತ್ತಿದ್ದರು. ಯುನೈಟೆಡ್ ಸೆರೆಬ್ರಲ್ ಪಾಲ್ಸಿ ಹಾಗೂ ಶ್ರಿನರ್ಸ್ ಚಿಲ್ಡ್ರನ್ಸ್ ನಂತಹ ಪ್ರತಿಷ್ಠಿತ ಸಂಸ್ಥೆಗಳ ರಾಯಭಾರಿಯಾಗಿ ಸೇವೆ ಸಲ್ಲಿಸುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

ತಮ್ಮ ನೆಚ್ಚಿನ ಸಹನಟನ ಅಗಲಿಕೆಯಿಂದ ಕಂಗೆಟ್ಟಿರುವ ‘ಬ್ರೇಕಿಂಗ್ ಬ್ಯಾಡ್’ ಖ್ಯಾತಿಯ ಆರನ್ ಪಾಲ್ ತೀವ್ರ ಆಘಾತ ವ್ಯಕ್ತಪಡಿಸಿದ್ದು, “ನನ್ನ ಸ್ನೇಹಿತ ಆರ್.ಜೆ., ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ. ನಿಮ್ಮೊಂದಿಗೆ ಕಳೆದ ಕ್ಷಣಗಳು ಅಮೂಲ್ಯ” ಎಂದು ಭಾವುಕರಾಗಿ ನುಡಿದರು. ಇನ್ನು ಸರಣಿಯಲ್ಲಿ ಇವರ ಚಿಕ್ಕಪ್ಪನ ಪಾತ್ರ ಮಾಡಿದ್ದ ಡೀನ್ ನಾರ್ರಿಸ್ ಕೂಡ ಮಿಟ್ಟ್ ಅವರ ಅಗಲಿಕೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ.

Must Read