ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ನೈತಿಕ ಅಧಃಪತನದ ವಿಚಾರ ಈಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಡಿಜಿಪಿ ರಾಮಚಂದ್ರ ರಾವ್ ಅವರದ್ದು ಎನ್ನಲಾದ ‘ರಾಸಲೀಲೆ’ ಪ್ರಕರಣವನ್ನು ಮುಂದಿಟ್ಟುಕೊಂಡು ಜೆಡಿಎಸ್ ಪಕ್ಷವು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಗೃಹ ಸಚಿವ ಜಿ. ಪರಮೇಶ್ವರ್ ಅವರ ಆಪ್ತರೆಂದೇ ಗುರುತಿಸಿಕೊಂಡಿರುವ ಡಿಜಿಪಿ ರಾಮಚಂದ್ರ ರಾವ್ ಅವರು ಕಚೇರಿಯಲ್ಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಇಡೀ ಪೊಲೀಸ್ ಇಲಾಖೆ ತಲೆತಗ್ಗಿಸುವಂತೆ ಮಾಡಿದೆ ಎಂದು ಜೆಡಿಎಸ್ ಎಕ್ಸ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.
ಪೊಲೀಸ್ ಸಮವಸ್ತ್ರಕ್ಕೆ ಗೌರವ ನೀಡದೆ, ಕರ್ತವ್ಯದ ಸ್ಥಳದಲ್ಲೇ ಇಂತಹ ನೀಚ ಕೃತ್ಯ ಎಸಗಿರುವುದು ಕ್ಷಮಿಸಲಾರದ ಅಪರಾಧ ಎಂದು ಪಕ್ಷ ಹೇಳಿದೆ.
ಈ ಹಿಂದೆ ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನೆರವು ನೀಡಿದ ಗಂಭೀರ ಆರೋಪವೂ ರಾಮಚಂದ್ರ ರಾವ್ ಮೇಲಿತ್ತು. ಈಗ ರಾಸಲೀಲೆ ಪ್ರಕರಣವು ಅವರ ವಿರುದ್ಧದ ಆರೋಪಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ.
ರಾಜ್ಯದ ಪೊಲೀಸ್ ಇಲಾಖೆಯ ಘನತೆ ಹರಾಜಾಗಲು ಗೃಹ ಸಚಿವರ ಅಸಮರ್ಥತೆ ಮತ್ತು ಸರ್ಕಾರದ ನಿಷ್ಕ್ರಿಯ ಆಡಳಿತವೇ ಕಾರಣ ಎಂದು ಜೆಡಿಎಸ್ ಟೀಕಿಸಿದೆ.
ಈ ಹಗರಣದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜೆಡಿಎಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಮಧ್ಯಪ್ರವೇಶಿಸಿ ಡಿಜಿಪಿ ರಾಮಚಂದ್ರ ರಾವ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದೆ.


