ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕ ಮಕ್ಕಳ ಪರೀಕ್ಷಾ ಪ್ರಶ್ನೆಯೊಂದು ರಾಜ್ಯಮಟ್ಟದ ಚರ್ಚೆಗೆ ಕಾರಣವಾದ ಘಟನೆಯೊಂದು ಛತ್ತೀಸ್‌ಗಢದ ಶಾಲೆಯೊಂದರಲ್ಲಿ ನಡೆದಿದೆ. ಅರ್ಧವಾರ್ಷಿಕ ಪರೀಕ್ಷೆಯ ಇಂಗ್ಲಿಷ್ ಪ್ರಶ್ನೆಯೊಂದು ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ನಾಯಿಯ ಹೆಸರನ್ನು ಗುರುತಿಸುವ ಸರಳ ಬಹು ಆಯ್ಕೆ ಪ್ರಶ್ನೆಯಲ್ಲಿ ‘ರಾಮ’ ಎಂಬ ಆಯ್ಕೆ ಸೇರಿಸಿದ್ದೇ ಕೆಲ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಶ್ನೆಯಲ್ಲಿ ನಾಯಿಯ ಹೆಸರಿಗಾಗಿ ಹಲವು ಆಯ್ಕೆಗಳನ್ನು ನೀಡಲಾಗಿದ್ದು, ಅವುಗಳಲ್ಲಿ ‘ರಾಮ’ ಎಂಬುದೂ ಸೇರಿತ್ತು. ಇದನ್ನು ಆಕ್ಷೇಪಿಸಿದ ಕೆಲವು ಹಿಂದು ಸಂಘಟನೆಗಳು, ಧಾರ್ಮಿಕವಾಗಿ ಗೌರವಿಸಲ್ಪಡುವ ಹೆಸರನ್ನು ಈ ರೀತಿಯಲ್ಲಿ ಬಳಸುವುದು ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿವೆ. ಮಹಾಸಮುಂಡ್ ಜಿಲ್ಲೆಯ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾಕಾರರು ಸೇರಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: Kitchen Tips | ಬೆಳ್ಳುಳ್ಳಿ ಸಿಪ್ಪೆ ತೆಗೆಯೋಕೆ ಕಷ್ಟಾ ಪಡ್ತಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್ಸ್
ಆದರೆ ಇದೇ ಪ್ರಶ್ನೆಯಲ್ಲಿ ‘ಬಾಲಾ’ ಹಾಗೂ ‘ಶೇರು’ ಎಂಬ ಇತರ ಆಯ್ಕೆಗಳು ಇದ್ದರೂ ಅವುಗಳ ಕುರಿತು ವಿರೋಧ ವ್ಯಕ್ತವಾಗಿಲ್ಲ ಎಂಬುದನ್ನು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ. ಜಿಲ್ಲಾ ಶಿಕ್ಷಣಾಧಿಕಾರಿ ವಿಜಯ್ ಲಾಂಗೆಹ್ ಮಾತನಾಡಿ, ದೂರು ಸ್ವೀಕರಿಸಲಾಗಿದ್ದು, ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆಗಳು ರಾಜನಂದಗಾಂವ್ ಜಿಲ್ಲೆಯಲ್ಲಿ ಮುದ್ರಿತವಾಗಿದ್ದು, ಮೂಲ ಪ್ರಶ್ನೆಯಲ್ಲಿ ತಿದ್ದುಪಡಿ ನಡೆದಿರಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕೆಲವು ಪೋಷಕರು ಕೂಡ ಮಕ್ಕಳ ಪ್ರಶ್ನೆ ಪತ್ರಿಕೆಯಲ್ಲಿ ಇಂತಹ ಆಯ್ಕೆಗಳು ಇರಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

