ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಬಲೂಚಿಸ್ತಾನ ಪಿಶಿನ್ನಲ್ಲಿರುವ ಸ್ವತಂತ್ರ ಅಭ್ಯರ್ಥಿಯ ಪಕ್ಷದ ಕಚೇರಿಯ ಹೊರಗೆ ಇಂದು (ಫೆ.7) ಬಾಂಬ್ ಸ್ಫೋಟಗೊಂಡಿದ್ದು, ಹನ್ನೆರಡು ಜನ ಸಾವನ್ನಪ್ಪಿದ್ದಾರೆ. 30 ಜನ ಗಾಯಗಗೊಂಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಪಾಕಿಸ್ತಾನದ ಪಿಶಿನ್ನ ಖನೋಜೈ ಪ್ರದೇಶದಲ್ಲಿ ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಕಚೇರಿಯ ಹೊರಗೆ ಬಾಂಬ್ ಸ್ಫೋಟ ಮಾಡಲಾಗಿದೆ. ಇನ್ನು ಸ್ಫೋಟದ ಸಂದರ್ಭದಲ್ಲಿ ಸ್ವತಂತ್ರ ಅಭ್ಯರ್ಥಿ ಅಸ್ಫಂಡ್ ಯಾರ್ ಖಾನ್ ಕಾಕರ್ ಅವರು ತಮ್ಮ ಕಚೇರಿಯಲ್ಲಿ ಇರಲಿಲ್ಲ.
ಈ ಘಟನೆಯ ಕುರಿತು ಪಾಕಿಸ್ತಾನದ ಚುನಾವಣಾ ಆಯೋಗವು ಪ್ರಾಂತೀಯ ಮುಖ್ಯ ಕಾರ್ಯದರ್ಶಿ ಮತ್ತು ಪ್ರಾಂತೀಯ ಪೊಲೀಸ್ ಮುಖ್ಯಸ್ಥರಿಂದ ತಕ್ಷಣದ ವರದಿಗಳನ್ನು ಕೇಳಿದೆ. ಈ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆದೇಶವನ್ನು ನೀಡಲಾಗಿದೆ ಎಂದು ಹೇಳಲಾಗಿದೆ. ಅಸ್ಫಂಡ್ ಯಾರ್ ಖಾನ್ ಕಾಕರ್ ಅವರ ಮೋಟಾರ್ ಬೈಕ್ನಲ್ಲಿ ಬಾಂಬ್ ಇಡಲಾಗಿತ್ತು ಎಂದು ಜಿಲ್ಲಾಧಿಕಾರಿ ಜುಮಾ ದಾದ್ ತಿಳಿಸಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡಿರುವ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೆರದುಕೊಂಡು ಹೋಗಲಾಗಿದೆ. ಬಲೂಚಿಸ್ತಾನದ ಗೃಹ ಮತ್ತು ಬುಡಕಟ್ಟು ವ್ಯವಹಾರಗಳ ಉಸ್ತುವಾರಿ ಸಚಿವ ಮಿರ್ ಜುಬೇರ್ ಖಾನ್ ಜಮಾಲಿ ಸಾವು ಮತ್ತು ಗಾಯಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಜಿಲ್ಲಾಧಿಕಾರಿಯಿಂದ ವರದಿಯನ್ನು ಕೇಳಿದ್ದಾರೆ.