ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಕಡೂರು ಗ್ರಾಮದಲ್ಲಿ ನೀರಿನ ತೊಟ್ಟಿಯಲ್ಲಿ ಮುಳುಗಿ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತ ಬಾಲಕನನ್ನು ಪ್ರಜ್ವಲ್ (9) ಎಂದು ಗುರುತಿಸಲಾಗಿದೆ. ನಿನ್ನೆ ಶನಿವಾರವಾದ್ದರಿಂದ ಬಾಲಕ ಶಾಲೆ ಮುಗಿಸಿ ಆಟವಾಡಲು ತೆರಳಿದ್ದ. ಹೊರಗೆ ಆಟವಾಡುತ್ತಿದ್ದ ಬಾಲಕ ಶಾಲೆಯ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರಿನ ತೊಟ್ಟಿಗೆ ಬಿದ್ದಿದ್ದಾನೆ.
ಸಂಜೆಯಾದರೂ ಪ್ರಜ್ವಲ್ ಮನೆಗೆ ಬಂದಿರಲಿಲ್ಲ. ಹೀಗಾಗಿ ಆತನ ಮನೆಯವರು ಹುಡುಕಾಟ ನಡೆಸಿದ್ದಾರೆ. ಆಗ ನೀರಿನ ತೊಟ್ಟಿಯಲ್ಲಿ ಮುಳುಗಿ ಪ್ರಜ್ವಲ್ ಮೃತಪಟ್ಟಿರುವುದು ಪತ್ತೆಯಾಗಿದೆ.
ನಂತರ ಬಾಲಕನ ಮೃತದೇಹವನ್ನು ನೀರಿನ ತೊಟ್ಟಿಯಿಂದ ಮೇಲಕ್ಕೆತ್ತಿ ರಟ್ಟೀಹಳ್ಳಿ ತಾಲೂಕು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ದಾಖಲಿಸಲಾಗಿದೆ. ರಟ್ಟೀಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.