ಹೊಸದಿಗಂತ ಮಂಗಳೂರು:
ಕುಡಿದ ಅಮಲಿನಲ್ಲಿ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪತಿ ಬಳಿಕ ಕೈಯಲ್ಲಿ ಕತ್ತಿ ಹಿಡಿದು ಡ್ಯಾನ್ಸ್ ಮಾಡಿ ವಿಕೃತಿ ಮೆರೆದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನಲ್ಲಿ ನಡೆದಿದೆ.
ಬಸ್ರೂರಿನ ಕಾಶಿಮಠ ಬಡಾವಣೆಯಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಅನಿತಾ (38) ಪತಿಯಿಂದ ಮಾರಣಾಂತಿಕ ಹಲ್ಲೆಗೊಳಗಾದ ಮಹಿಳೆ.
ಆಕೆಯ ಪತಿ, ಆರೋಪಿ ಲಕ್ಷ್ಮಣ ಎಂಬಾತನನ್ನು ಘಟನಾ ಸ್ಥಳದಿಂದ ಭಾರೀ ಸಾಹಸಪಟ್ಟು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಮೂಲದ ಲಕ್ಷ್ಮಣ ಮತ್ತು ಅನಿತಾ ದಂಪತಿ ಕಾಶಿಮಠದಲ್ಲಿ ತೋಟ ನೋಡಿಕೊಂಡಿದ್ದರು. ನಾಲ್ಕು ತಿಂಗಳ ಹಿಂದೆ ಬಂದಿದ್ದ ಇವರು ಉಡುಪಿಯಲ್ಲಿ ನೆಲೆಸಿದ್ದರು. ಶನಿವಾರ (ಆ.3) ಸಂಜೆ ಪಾನಮತ್ತರಾಗಿ ಬಂದ ಲಕ್ಷ್ಮಣ, ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಅಡುಗೆ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಕಂಡು ಬಾಗಿಲನ್ನು ಹಾಕಿಕೊಂಡು ಕತ್ತಿ ಕೈಯಲ್ಲಿ ಹಿಡಿದುಕೊಂಡು ನರ್ತಿಸುತ್ತಾ ವಿಕೃತಿ ಮೆರೆದಿದ್ದಾನೆ.
ಇದನ್ನು ಗಮನಿಸಿದ ನಿವಾಸಿಗಳು ಕಿಟಕಿ ಒಡೆದು ಅಡುಗೆ ಕೋಣೆಗೆ ತೆರಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಹೊರತಂದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಮನೆಗೆ ಅಶ್ರುವಾಯು ಸಿಡಿಸಿ ಆರೋಪಿಯನ್ನು ಸುಮಾರು ಒಂದೂವರೆ ಗಂಟೆಗಳ ನಂತರ ಬಂಧಿಸಲಾಯಿತು. ಈ ಕುರಿತು ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.