ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ದೊಡ್ಡಣ್ಣ ಅಮೆರಿಕ ಮತ್ತು ಇರಾನ್ ನಡುವಿನ ಜಿದ್ದಾಜಿದ್ದಿ ಈಗ ಅನಿರೀಕ್ಷಿತ ತಿರುವು ಪಡೆದಿದೆ. ಇರಾನ್ ನಮಗೆ ಅದ್ಭುತವಾದ “ಗಿಫ್ಟ್” ಕೊಟ್ಟಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ.
ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, “ಇರಾನ್ ನಿನ್ನೆ ಒಂದು ಅದ್ಭುತ ಕೆಲಸ ಮಾಡಿದೆ. ಅದು ನಮಗೆ ದೊಡ್ಡ ಬಹುಮಾನ ನೀಡಿದೆ, ಅದು ತೈಲ ಮತ್ತು ಅನಿಲಕ್ಕೆ ಸಂಬಂಧಿಸಿದ್ದು” ಎಂದು ಸುಳಿವು ನೀಡಿದ್ದಾರೆ. ಮುಖ್ಯವಾಗಿ ಜಗತ್ತಿನ ತೈಲ ಪೂರೈಕೆಯ ಜೀವನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ ವಿಚಾರದಲ್ಲಿ ಇರಾನ್ ಮಣಿದಿದೆ ಎಂಬುದು ಟ್ರಂಪ್ ಮಾತಿನ ಅರ್ಥ.
ಇರಾನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಹೇಳಿದ್ದ ಟ್ರಂಪ್, ಈಗ ತಮ್ಮ ನಿರ್ಧಾರವನ್ನು 5 ದಿನಗಳ ಕಾಲ ಮುಂದೂಡಿದ್ದಾರೆ. ಇರಾನ್ ಇನ್ಮುಂದೆ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಹೊಂದುವುದಿಲ್ಲ ಎಂದು ಒಪ್ಪಿಕೊಂಡಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
“ಅದು ಅಪಾರ ಮೊತ್ತದ ಹಣಕ್ಕೆ ಸಮನಾದ ದೊಡ್ಡ ಉಡುಗೊರೆ, ಆದರೆ ಅದು ಏನೆಂದು ನಾನು ಈಗಲೇ ಬಹಿರಂಗಪಡಿಸುವುದಿಲ್ಲ” ಎಂದು ಟ್ರಂಪ್ ಕುತೂಹಲ ಕಾಯ್ದಿರಿಸಿದ್ದಾರೆ.
ಆದರೆ, ಒಂದು ಕಡೆ ಟ್ರಂಪ್ ಸಂಧಾನದ ಮಾತನಾಡುತ್ತಿದ್ದರೆ, ಇರಾನ್ ಮಾತ್ರ ತಾನು ಯಾವುದೇ ಕದನ ವಿರಾಮದ ಮಾತುಕತೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.



