October 18, 2026
Sunday, October 18, 2026
spot_img

ರಾಹುಕಾಲ ಅಂದ್ರೆ ಸಿಎಂಗೂ ಭಯನಾ?: ಬಜೆಟ್ ಮುಹೂರ್ತದ ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದ್ರೆ ಸಾಮಾನ್ಯವಾಗಿ ವೈಚಾರಿಕತೆ, ತರ್ಕದ ಮಾತುಗಳು ನೆನಪಾಗುತ್ತವೆ. ಆದರೆ, ಈ ಬಾರಿಯ ಬಜೆಟ್ ಮಂಡನೆಯ ಹಿಂದೆ ‘ರಾಹುಕಾಲ’ದ ಲೆಕ್ಕಾಚಾರವಿತ್ತು ಎಂಬ ವಿಚಾರ ಈಗ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾಗಿದೆ.

ಬಿಜೆಪಿ ಶಾಸಕ ಸುರೇಶ್ ಕುಮಾರ್ ಈ ಹಿಂದೆ ಮಾಡಿದ್ದ ಆರೋಪಕ್ಕೆ ಈಗ ಖುದ್ದು ಸಿಎಂ ಅವರೇ ಮುದ್ರೆ ಒತ್ತಿದ್ದಾರೆ. “ಹೌದು, ನಾನು ರಾಹುಕಾಲ ನೋಡಿಕೊಂಡೇ ಬಜೆಟ್ ಮಂಡನೆ ಮಾಡಿದ್ದು ನಿಜ” ಎಂದು ಸಿದ್ದರಾಮಯ್ಯ ಸದನದಲ್ಲಿ ಒಪ್ಪಿಕೊಂಡಾಗ ಎಲ್ಲರೂ ಒಂದು ಕ್ಷಣ ಆಶ್ಚರ್ಯಚಕಿತರಾದರು.

ಬಜೆಟ್ ಮೇಲಿನ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ರಾಹುಕಾಲದ ಪ್ರಸ್ತಾಪ ಮಾಡಿದರು. ಸದಾ ಕಾಲಾಷ್ಟಮಿ, ರಾಹುಕಾಲಗಳನ್ನು ನಂಬದ ಸಿದ್ದರಾಮಯ್ಯನವರು ಅಂದು ಬೆಳಗ್ಗೆ 10.15ಕ್ಕೆ ಸರಿಯಾಗಿ ಬಜೆಟ್ ಓದಿದ್ದು ಯಾಕೆ? ಎಂದು ಕಾಲೆಳೆದರು.

ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಸಿದ್ದರಾಮಯ್ಯ, “ನೋಡಿ, ಮನೆಯವರು ಮತ್ತು ಅಧಿಕಾರಿಗಳ ಮಾತು ಕೇಳಬೇಕಲ್ಲವೇ? ನಿಮ್ಮಂತವರು ಏನಾದರೂ ಅಂದುಕೊಳ್ಳಬಾರದು ಎಂಬ ಕಾರಣಕ್ಕೆ ಸಮಯ ನಿಗದಿ ಮಾಡಿದ್ದೆವು,” ಎಂದು ಹಾಸ್ಯದ ಧಾಟಿಯಲ್ಲೇ ಸತ್ಯ ಒಪ್ಪಿಕೊಂಡರು.

ಸಿದ್ದರಾಮಯ್ಯನವರ ಮಾತಿಗೆ ಪ್ರತಿಕ್ರಿಯಿಸಿದ ಆರ್. ಅಶೋಕ್, “ಅವತ್ತಿನ ಪರಿಸ್ಥಿತಿಯೇ ಬೇರೆ ಇತ್ತು. ಮುಂದೆಯೂ ನೀವೇ ಬಜೆಟ್ ಮಂಡಿಸಬೇಕು ಎಂಬ ಆಸೆ ಇರಬೇಕಲ್ಲ? ಅದಕ್ಕೇ ಈ ಬಾರಿ ಕಾಲ-ಘಳಿಗೆಯನ್ನು ಅಷ್ಟೊಂದು ಕಟ್ಟುನಿಟ್ಟಾಗಿ ಪಾಲಿಸಿದ್ದೀರಿ,” ಎಂದು ಲೇವಡಿ ಮಾಡಿದರು.

ಒಟ್ಟಿನಲ್ಲಿ, ‘ನಾಸ್ತಿಕ’ ಪಟ್ಟ ಹೊತ್ತಿರುವ ಸಿದ್ದರಾಮಯ್ಯನವರು ಬಜೆಟ್ ಮಂಡನೆಗೆ ರಾಹುಕಾಲದಂತಹ ನಂಬಿಕೆಗಳಿಗೆ ಮಣಿದಿದ್ದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.

Must Read