ಹೊಸದಿಗಂತ ಡಿಜಿಟಲ್ ಡೆಸ್ಕ್:
ಬುಧವಾರ ತಡರಾತ್ರಿ ಪ್ರವಾಹ ಸಂತ್ರಸ್ತರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 18 ಮಂದಿ ಸಜೀವ ದಹನವಾದ ಘಟನೆ ಪಾಕಿಸ್ತಾನದ ನೂರಿಯಾಬಾದ್‌ನಲ್ಲಿ ನಡೆದಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಸಿಂಧ್‌ನ ಜಮ್‌ಶೋರೊ ಜಿಲ್ಲೆಯ ನೂರಿಯಾಬಾದ್ ಬಳಿ ಪ್ರವಾಹ ಸಂತ್ರಸ್ತರನ್ನು ಕರೆದೊಯ್ಯುತ್ತಿದ್ದ ವಾಹನವೊಂದು ಬೆಂಕಿಗೆ ಆಹುತಿಯಾಗಿದೆ. ಈ ಭೀಕರ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಮಹಿಳೆಯರು ಸಾವನ್ನಪ್ಪಿದ್ದಾರೆ.
ಬಸ್ ಅಪಘಾತದಲ್ಲಿ ಎಂಟು ಮಕ್ಕಳು ಸೇರಿದಂತೆ 18 ಮೃತ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೂರಿಯಾಬಾದ್ ಡಿಎಸ್ಪಿ ವಾಜಿದ್ ತಾಹೀಮ್ ತಿಳಿಸಿದ್ದಾರೆ. ಹವಾನಿಯಂತ್ರಣ ವ್ಯವಸ್ಥೆಯಲ್ಲಿನ ದೋಷದಿಂದ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ ಅಪಘಾತದ ಸಮಯದಲ್ಲಿ 35 ಪ್ರಯಾಣಿಕರು ಇದ್ದರು ಮತ್ತು ಅವರಲ್ಲಿ ಕೆಲವರು ಬಸ್‌ನಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತರೆಲ್ಲರೂ ಮುಗೈರಿ ಸಮುದಾಯಕ್ಕೆ ಸೇರಿದವರಾಗಿದ್ದು, ತಾವು ಕರಾಚಿಯಿಂದ ಖೈರ್‌ಪುರ್ ನಾಥನ್‌ಶಾಗೆ ಹಿಂದಿರುಗುತ್ತಿರುವುದಾಗಿ ಬದುಕುಳಿದವರು ಹೇಳಿದರು. ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದವರನ್ನು ಜಮ್‌ಶೋರೊದ ಲಿಯಾಕತ್ ಯೂನಿವರ್ಸಿಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಕಜಕಿಸ್ತಾನ ಪ್ರವಾಸದಲ್ಲಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಬಸ್ ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
#Pakistan At least 18 passengers were killed, several others injured after a passenger bus caught fire on the M9 motorway near Jamshoro’s Nooriabad Town.According to the police, the ill-fated bus, with flood affectees on board,was heading towards Khairpur Nathan Shah from Karachi pic.twitter.com/XSap70K5b3
— Surendhar (@Surendhar_Twitz) October 13, 2022