ಆರು ವಿಭಿನ್ನ ಪ್ರೇಮಕಥೆಗಳ ಸಮಾಗಮ ʼಶುಭಮಂಗಳʼ: ಅ. 14ರಂದು ಚಿತ್ರ ರಾಜ್ಯಾದ್ಯಂತ ತೆರೆಗೆ

ಹೊಸದಿಗಂತ ವರದಿ, ಹುಬ್ಬಳ್ಳಿ:
ಪ್ರೀತಿ, ಕಾಮಿಡಿ ಹಾಗೂ ಸೆಂಟಿಮೆಂಟ್ ಸೇರಿದಂತೆ ಎಲ್ಲಾ ಅಂಶಗಳು ಮಿಳಿತವಾಗಿರುವ ʼಶುಭಮಂಗಳʼ ಚಿತ್ರದಲ್ಲಿ ಯುವ ಜನಾಂಗದ ಮಾಡ್ರನ್‌ ಪ್ರೇಮದ ಕಥೆ ಹೇಳಲಾಗಿದ್ದು, ಅ. 14 ರಂದು ರಾಜ್ಯಾದ್ಯಂತ 100 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ಸಂತೋಷ್ ಗೋಪಾಲ್ ಹೇಳಿದ್ದಾರೆ.
ಮದುವೆ ಮನೆಯಲ್ಲಿ ನಡೆಯುವ ವಿವಿಧ ಸನ್ನಿವೇಶ ಹಾಗೂ ಆರು ವಿಭಿನ್ನ ಲವ್ ಸ್ಟೋರಿಗಳನ್ನಿಟ್ಟುಕೊಂಡು ಚಿತ್ರಕಥೆ ಬರೆಯಲಾಗಿದೆ. ಸಿನಿಮಾ ರಸಿಕರು ಕುಟುಂಬದ ಸಮೇತವಾಗಿ ಬಂದು ವೀಕ್ಷಣೆ ಮಾಡುವಂತಹ ಚಿತ್ರವಾಗಿದೆ ಎಂದು ಅವರು ಮಾಧ್ಯಮ ಘೋಷ್ಠಿಯಲ್ಲಿ ಹೇಳಿದರು.
ಚಿತ್ರದ ನಾಯಕನಟನಾಗಿ ಸಿದ್ದಾರ್ಥ ಮಾಧ್ಯಮಿಕ, ನಾಯಕಿಯಾಗಿ ಚಾರಮೀನಾರ್ ಖ್ಯಾತಿಯ ಮೇಘನಾ ಗಾಂವ್ಕರ್, ಹಿತಾ ಚಂದ್ರಶೇಖರ್‌, ರಾಕೇಶ್ ಮಯ್ಯ, ದೀಪ್ತಿ ನಾಗೇಂದ್ರ, ಆದಿತಿ ರಾಮ್, ಗೋಪಾಲ ಕೃಷ್ಣ ದೇಶಪಾಂಡೆ, ಬಿಂದು ರಕ್ಸಿದಿ, ಅರುಣ ಬಾಲರಾಜ್, ಬಾಬು ಹಿರಣ್ಣಯ್ಯ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ ಎಂದರು.
ಸಿನಿಮಾದ‌ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಹಿಟ್‌ ಎನಿಸಿಕೊಂಡಿವೆ. ಜೂಡಾ ಸ್ಯಾಂಡಿ ಸಂಗೀತ ಹಾಗೂ ಕೆ. ಕಲ್ಯಾಣ, ಜಯಂತ ಕಾಯ್ಕಿಣಿ ಹಾಗೂ ತ್ರಿವಿಕ್ರಮ ಸಾಹಿತ್ಯ ಬರೆದಿದ್ದಾರೆ. ನೃತ್ಯ ಸಹಯೋಜನೆ ಬಿ. ಧನಂಜಯ್ ಮಾಡಿದ್ದಾರೆ ಎಂದು ತಿಳಿಸಿದರು.
ಛಾಯಾಗ್ರಹಣ ರಾಕೇಶ ಬಿ. ರಾಜ್, ಕಲಾ ನಿರ್ದೇಶನ ದಿವಾಕರ ಎಚ್.ಎಸ್, ಸಹ ನಿರ್ದೇಶನ ಮಯೂರ್ ರೂಲ್, ಪಾವಗಡ ರಾಜ್, ಕಾರ್ಯಕಾರಿ ನಿರ್ಮಾಪಕ ಮನು ಮಾಡಿದ್ದಾರೆ ಎಂದರು.
ನಟಿ ಮೇಘನಾ ಗಾಂವ್ಕರ್ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡ ಸಿನಿಮಾಕ್ಕೆ ವಿಶೇಷ ಪ್ರೋತ್ಸಾಹ ದೊರೆಯುತ್ತದೆ. ನಿರ್ದೇಶಕರಾದ ಸಂತೋಷ್ ಅವರು ಚೊಚ್ಚಲ ಚಿತ್ರದಲ್ಲೇ ಭರವಸೆ ಹುಟ್ಟಿಸಿದ್ದಾರೆ. ಶುಭಮಂಗಳ ಸಿನಿಮಾ ಜನರು ಸ್ವೀಕರಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಟ ರಾಕೇಶ ಮಯ್ಯಾ, ನಟಿ ಹಿತಾ ಚಂದ್ರಶೇಖರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!