ಹೊಸದಿಗಂತ ವರದಿ, ಮಂಗಳೂರು:
ಸತತವಾಗಿ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಗೆ ತುಂಡಾಗಿ ಗದ್ದೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಕಾಲೇಜು ವಿದ್ಯಾರ್ಥಿನಿಯೋರ್ವಳು ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಶುಕ್ರವಾರ ನಡೆದಿದೆ.
ಆಶ್ನಿ ಶೆಟ್ಟಿ(20) ಎಂಬಾಕೆ ಮೃತಪಟ್ಟ ವಿದ್ಯಾರ್ಥಿನಿ.
ಕಲ್ಲಕಲಂಬಿಯ ಹರೀಶ್ ಶೆಟ್ಟಿ ಮತ್ತು ಆಶಾ ಶೆಟ್ಟಿ ದಂಪತಿಯ ಪುತ್ರಿ ಆಶ್ನಿ ಶೆಟ್ಟಿ ಶುಕ್ರವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಮನೆಯ ನಾಯಿಯನ್ನು ಹುಡುಕಿಕೊಂಡು ಗದ್ದೆಯ ಕಡೆಗೆ ಹೋಗಿದ್ದು, ಈ ವೇಳೆ ಗದ್ದೆಯ ನೀರಿನಲ್ಲಿ ಮುಳುಗಿದ್ದ ನಾಯಿಯನ್ನು ಕಂಡು ಅದನ್ನು ಎತ್ತಲು ಪ್ರಯತ್ನಿಸಿದಳು. ಆಗ ಏಕಾಏಕಿಯಾಗಿ ವಿದ್ಯುತ್ ಪ್ರವಹಿಸಿ ಆಶ್ನಿ ನೀರಿಗೆ ಬಿದ್ದಳು. ಹತ್ತಿರದಲ್ಲಿದ್ದ ವಿದ್ಯುತ್ ಕಂಬದ ತಂತಿ ತುಂಡಾಗಿ ಗದ್ದೆಗೆ ಬಿದ್ದಿದ್ದ ಪರಿಣಾಮ ವಿದ್ಯುತ್ ಸ್ಪರ್ಶಗೊಂಡು ಮೂರು ನಾಯಿ ಹಾಗೂ ಕೇರೆ ಹಾವೊಂದು ಸತ್ತಿರುವುದರ ಅರಿವಿಲ್ಲದೆ ತನ್ನ ಮನೆಯ ನಾಯಿಯನ್ನು ಮೇಲೆತ್ತಲು ಪ್ರಯತ್ನಿಸಿದಾಗ ಆಕೆಗೂ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ.
ಮಾಹಿತಿ ಪಡೆದ ಮೆಸ್ಕಾಂನವರು ವಿದ್ಯುತ್ ಕಡಿತಗೊಳಿಸಿದ ಬಳಿಕ ಸ್ಥಳೀಯರು ಮತ್ತು ಮನೆಯವರು ಆಶ್ನಿಯನ್ನು ರಕ್ಷಿಸಲು ತೀವ್ರ ಪ್ರಯತ್ನ ನಡೆಸಿದ್ದಾರೆ.
ಸ್ಥಳೀಯರು ಮೆಸ್ಕಾಂಗೆ ಕರೆ ಮಾಡಿದ ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಂಡ ನಂತರ ಗಂಭೀರ ಸ್ಥಿತಿಯಲ್ಲಿದ್ದ ಅಶ್ನಿಯನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಸ್ಪಂದಿಸದ ಆಶ್ನಿ ಕೊನೆಯುಸಿರೆಳೆದಿದ್ದಾಳೆ.
ಮಂಗಳೂರಿನ ಮ್ಯಾಪ್ಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಅಶ್ನಿ ಚಾರ್ಟಡ್ ಅಕೌಂಟೆಂಟ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಳು. ಕಲ್ಲಕಲಂಬಿಯ ಹರೀಶ್-ಆಶಾ ದಂಪತಿಗೆ ಮಕ್ಕಳಿಬ್ಬರಿದ್ದು, ಪುತ್ರ ನಗರದಲ್ಲಿ ಉದ್ಯೋಗದಲ್ಲಿದ್ದಾನೆ. ಪುತ್ರಿಯ ಆಕಸ್ಮಿಕ ಸಾವಿಂದ ತಂದೆ-ತಾಯಿ ತೀವ್ರ ಆಘಾತಗೊಂಡಿದ್ದಾರೆ.