ಹೊಸದಿಗಂತ ಡಿಜಿಟಲ್ ಡೆಸ್ಕ್:
ʼಶಾರ್ಕ್ ಟ್ಯಾಂಕ್ ಇಂಡಿಯಾʼದ ಎರಡನೇ ಆವೃತ್ತಿ ಶುರುವಾಗಿದೆ.ಆದ್ರೆ ಈಗ ಶಾರ್ಕ್ ಟ್ಯಾಂಕ್ ವೇದಿಕೆಯ ಮೇಲೆ ಬಂದ ತಂಡವೊಂದರ ಕುರಿತು ದೇಶದಾದ್ಯಂತ ಚರ್ಚೆಯಾಗುತ್ತಿದೆ. ಯಾಕಂದ್ರೆ ಆ ತಂಡ ಅದಾಗಲೇ ವಿದೇಶದಲ್ಲಿಯೂ ಹೆಸರು ಮಾಡಿದ್ದ ಕಂಪನಿಯೊಂದನ್ನು ಅದಾಗಲೇ ಕಟ್ಟಿನಿಲ್ಲಿಸಿತ್ತು. ಆದರೆ ಅದ್ಯಾವುದೋ ದೌರ್ಭಾಗ್ಯದಿಂದ ಕಂಪನಿ ಏಕಾಏಕಿ ಮುಚ್ಚಿ ಹೋಯಿತು. ಅಂತಹ ಸಂದರ್ಭದಲ್ಲಿ ಛಲಬಿಡದ ತ್ರಿವಿಕ್ರಮರಂತೆ ಅದೇ ತಂಡ ಮತ್ತೆ ಬಿದ್ದಜಾಗದಲ್ಲೇ ಎದ್ದು ನಿಂತಿತು. ಹೊಸದೊಂದು ಕಂಪನಿಯನ್ನು ಹುಟ್ಟುಹಾಕಿ ಹಿಂದಿನ ಕಂಪನಿಗಿಂತ ದ್ವಿಗುಣ ಆದಾಯ ಗಳಿಸಿ ಶಾರ್ಕ್ ಟ್ಯಾಂಕ್ ಮೆಟ್ಟಿಲೇರಿದೆ. ಅದ್ಯಾವ ಕಂಪನಿಯದು ಎಂದಿರಾ? ಆ ಕಥೆ ಇಲ್ಲಿದೆ ನೋಡಿ
2014 ರಲ್ಲಿ ಎಂಜಿನಿಯರಿಂಗ್ ಮುಗಿಸಿದ ವಿನಯ್ ಸಿಂಘಾಲ್, ಶಶಾಂಕ್ ವೈಷ್ಣವ್, ಪ್ರವೀಣ ಸಿಂಘಲ್ ಎಂಬ ಮೂವರು ಗೆಳೆಯರ ತಂಡವೊಂದು ಕಂಟೆಂಟ್ ಸೃಷ್ಟಿಸುವ ಕಂಪನಿಯೊಂದನ್ನು ಹುಟ್ಟುಹಾಕಿದರು. ಅದರ ಹೆಸರೇ ವಿಟ್ಟಿ ಫೀಡ್ (Wittyfeed). ನಾಲ್ಕು ವರ್ಷಗಳಲ್ಲಿ ಈ ಕಂಪನಿ ಹೇಗೆ ಬೆಳೆಯಿತೆಂದರೆ ದೇಶ ವಿದೇಶಗಳಲ್ಲಿಯೂ ತನ್ನ ಕಚೇರಿಗಳನ್ನು ಸ್ಥಾಪಿಸಿತು. ಅಮೆರಿಕದ ಬಜ್ ಫೀಡ್ ಬಿಟ್ಟರೆ ವಿಟ್ಟಿ ಫೀಡ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿತ್ತು. ತಿಂಗಳಿಗೆ 120 ಮಿಲಿಯನ್ ಬಳಕೆದಾರರ ಟ್ರಾಫಿಕ್ ಹೊಂದಿದ್ದ ವಿಟ್ಟಿ ಫೀಡ್ 40 ಕೋಟಿ ರುಪಾಯಿಗಳ ವಾರ್ಷಿಕ ಆದಾಯ ಹೊಂದಿತ್ತು. ಆದರೆ 2018ರಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಫೇಸ್ಬುಕ್ ಈ ಕಂಪನಿಯನ್ನು ತನ್ನ ವೇದಿಕೆಯಿಂದ ಹೊರಹಾಕಿತು. ಕೇಂಬ್ರಿಡ್ಜ್ ಅನಾಲಿಟಿಕಾದ ವರದಿಯನ್ನಾಧರಿಸಿ ಅಮೆರಿಕದ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ ಎಂದು ಆರೋಪಿಸಿ ವಿಟ್ಟಿ ಫೀಡ್ ಅನ್ನು ನಿಷೇಧಿಸಲಾಗಿತ್ತು. ಮೂವರು ವರ್ಷಗಳಿಂದ ಹಾಕಿದ್ದ ಶ್ರಮ ರಾತ್ರೋ ರಾತ್ರಿ ಮಣ್ಣು ಪಾಲಾಗಿತ್ತು. ನೀವು ವರ್ಷಗಟ್ಟಲೇ ಕಷ್ಟಪಟ್ಟು ಬೆವರುಸುರಿಸಿ ಮಾಡಿದ ಕೆಲಸವೊಂದು ಯಶಸ್ಸಿನ ತುತ್ತತುದಿ ತಲುಪಿದ ಬೆನ್ನಲ್ಲೇ ಏಕಾಏಕಿ ನಿರ್ನಾಮವಾಗಿಬಿಟ್ಟರೆ ನೀವೇನು ಮಾಡುತ್ತೀರಾ? ತಲೆ ಮೇಲೆ ಕೈ ಹೊತ್ತು ಕೂರುತ್ತೀರ, ಇಲ್ಲವೇ ವರ್ಷಗಟ್ಟಲೇ ಡಿಪ್ರೆಶನ್ ಗೂ ಹೋಗಬಹುದು. ಕೆಲವರಿಗೆ ಆತ್ಮ ಹತ್ಯೆಗೂ ಆಲೋಚನೆ ಬರಬಹುದು. ಆದರೆ ಈ ಸಂಸ್ಥಾಪಕರಲ್ಲಿದ್ದ ಛಲ ಅವರ ಹೊಸ ಪ್ರಯಾಣಕ್ಕೆ ನಾಂದಿಯಿಟ್ಟಿತು.
ಅವರದೇ ಮಾತುಗಳಲ್ಲಿ ಹೇಳಬೇಕೆಂದರೆ ʼಕೆಲ ಕಾಲ ನಾವೂ ಖಿನ್ನತೆಗೆ ಒಳಗಾಗಿದ್ದೆವು, ಥೆರಪಿಗೆ ಹೋಗುತ್ತಿದ್ದೆವು. ಆದರೆ ಸೋಲೋಪ್ಪಲು ನಾವು ತಯಾರಿರಲಿಲ್ಲ. ನಮ್ಮ ಬಳಿ ಇದ್ದ ಹಣದಿಂದ 2019ರ ವರೆಗೂ ನಮ್ಮ ಉದ್ಯೋಗಿಗಳಿಗೆ ಸಂಬಳ ನೀಡುತ್ತಿದ್ದೆವು. ಆದರೆ ನಂತರದಲ್ಲಿ ಆ ಹಣವೂ ಖಾಲಿಯಾಯಿತು. ಆಗ ನಮ್ಮ ಬಳಿ ಉಳಿದಿದ್ದ 90 ಉದ್ಯೋಗಿಗಳ ಹತ್ತಿರಹೋಗಿ ಹೊಸ ಯೋಚನೆ ಮುಂದಿಟ್ಟೆವು. ಅರ್ಧಕ್ಕಿಂತ ಕಡಿಮೆ ಸಂಬಳ ನೀಡುವುದಾಗಿ ಹೇಳಿದೆವು. ಉಳಿದ ಹಣವನ್ನು ಕಂಪನಿಯ ಈಕ್ವಿಟಿ ರೂಪದಲ್ಲಿ ಆಫರ್ ಮಾಡಿದೆವು. 54 ಜನ ನಮ್ಮ ಬೆಂಬಲಕ್ಕೆ ನಿಂತರು. ಅಲ್ಲಿಂದ ನಮ್ಮ ಹೊಸ ಪ್ರಯಾಣ ಪ್ರಾರಂಭವಾಯಿತುʼ.
ಹೀಗೆ ಅವರು ಹುಟ್ಟು ಹಾಕಿದ ಹೊಸ ಕಂಪನಿಯೇ ʼಸ್ಟೇಜ್ʼ (STAGE). ಇದೊಂದು ಒಟಿಟಿ ಪ್ಲಾಟ್‌ಫಾರ್ಮ್. ಉಳಿದದೆಲ್ಲ ಒಟಿಟಿಗಳಂತೆಯೇ ಇದು ಕಂಟೆಂಟ್ ನೀಡುತ್ತದಾರೂ ಇದರಲ್ಲಿ ಪ್ರಾಮುಖ್ಯತೆ ಇರುವುದು ಸ್ಥಳೀಯ ವಿಷಯಗಳಿಗೆ. ವಿಶೇಷವಾಗಿ ಹರಿಯಾಣ ಮತ್ತು ರಾಜಸ್ಥಾನಿ ಸ್ಥಳೀಯ ವಿಷಯಗಳನ್ನು ಇದು ವೀಕ್ಷಕರಿಗೆ ನೀಡುತ್ತದೆ. ಇಂದು ಕಂಪನಿ ದೊಡ್ಡದಾಗಿ ಬೆಳೆಯುತ್ತಿದೆ. 1.3 ಲಕ್ಷ ಪಾವತಿ ಚಂದಾದಾರರನ್ನು ಹೊಂದಿದ್ದರೆ 300ಕೋಟಿ ರೂಪಾಯಿಯಷ್ಟಿದೆ ಕಂಪನಿಯ ಮೌಲ್ಯ. ಮೊನ್ನೆ ಮೊನ್ನೆಯಷ್ಟೇ ಶಾರ್ಕ್ ಟ್ಯಾಂಕಿಗೆ ಬಂದು ಅಲ್ಲಿನ ಹೂಡಿಕೆದಾರರಿಂದ ಮೆಚ್ಚುಗೆ ಗಳಿಸಿದ್ದಲ್ಲದೇ ಅವರಿಂದ ಹೂಡಿಕೆಯನ್ನೂ ಪಡೆದಿದೆ. ಅದಿಕ್ಕಾಗಿಯೇ ಬಲ್ಲವರೊಂದು ಮಾತು ಹೇಳಿದ್ದಾರೆ ʼಹೇಗೆ ಸೋತೆ ಎಂಬುದು ಮುಖ್ಯವಲ್ಲ, ಬಿದ್ದ ಜಾಗದಲ್ಲೇ ಮತ್ತೆ ಹೇಗೆ ಎದ್ದು ನಿಲ್ಲುತ್ತೀಯ ಎಂಬುದು ಮುಖ್ಯʼ ಎಂದು.