ಹೊಸ ದಿಗಂತ ವರದಿ, ದಾವಣಗೆರೆ:
ಅಪ್ರಾಪ್ತ ವಯಸ್ಕ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ಅಪರಾಧಿಗೆ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 17 ಸಾವಿರ ರೂ. ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಜಿಲ್ಲೆಯ ಹರಿಹರ ತಾಲೂಕು ಗುತ್ತೂರು ಗ್ರಾಮದ ಹರಿಹರೇಶ್ವರ ಬಡಾವಣೆ ನಿವಾಸಿ ಸಾಧಿಕ್ ಅಲಿ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ 2020 ಜೂನ್ ತಿಂಗಳಿನಲ್ಲಿ ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ, ರಾಣೇಬೆನ್ನೂರು ತಾಲೂಕಿನ ಸಂಬಂಧಿಕರ ಮನೆಯಲ್ಲಿ ಉಳಿಸಿಕೊಂಡು ಅತ್ಯಾಚಾರ ಎಸಗಿದ್ದ ಬಗ್ಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಂದಿನ ಹರಿಹರ ವೃತ್ತ ನಿರೀಕ್ಷಕ ಎಂ.ಶಿವಪ್ರಸಾದ್ ಪ್ರಕರಣದ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸುದೀರ್ಘ ವಿಚಾರಣೆ ನಂತರ ಆರೋಪ ಸಾಬೀತಾಗಿದ್ದರಿಂದ ನ್ಯಾಯಾಧೀಶ ಎನ್.ಶ್ರೀಪಾದ ಅಪರಾಧಿ ಸಾಧಿಕ್ ಅಲಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸಂತ್ರಸ್ಥೆಗೆ 5 ಲಕ್ಷ ರೂ. ಪರಿಹಾರವನ್ನು ಸರ್ಕಾರಿದಿಂದ ನೀಡಲು ಆದೇಶಿಸಿದ್ದಾರೆ. ಸಂತ್ರಸ್ಥೆ ಪರವಾಗಿ ಸರ್ಕಾರಿ ವಕೀಲೆ ಸುನಂದ ಮಡಿವಾಳ್ ವಾದ ಮಂಡಿಸಿದ್ದರು.